ವಿಚಾರಣಾಧೀನ ಕೈದಿಗಳ ಆರೋಗ್ಯ ಮುಖ್ಯ
ಮಂಗಳೂರು: ಕೈದಿಗಳಿಗೆ ಔಷಧ, ವೈದ್ಯರ ಸಂದರ್ಶನಕ್ಕೆ ಉತ್ತಮ ಕೊಠಡಿ, ತಕ್ಷಣಕ್ಕೆ ಕೆಮ್ಮು, ಶೀತಕ್ಕೆ ನೀಡುವ ಔಷಧ ಇಟ್ಟುಕೊಂಡಿರಬೇಕು ಎಂದು ಮಾನವ ಹಕ್ಕು ಆಯೋಗ ಸದಸ್ಯ ಎಸ್.ಜಿ. ಹುನಗುಂದ ಜೈಲು ಅಧೀಕ್ಷಕರಿಗೆ ಸೂಚಿಸಿದರು.
ಶುಕ್ರವಾರ ಜೈಲಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು. 2 ಬ್ಲಾಕ್ 11 ಬ್ಯಾರಕ್, ಅಡುಗೆಕೋಣೆ, ಗ್ರಂಥಾಲಯ, ಶೌಚಾಲಯ ತಪಾಸಣೆ ನಡೆಸಿದರು. ವೈದ್ಯರಿಗೆ ಜೈಲಿಗೆ ಬಂದೆ ಎಂದು ಅನಿಸಬಾರದು. ಕೈದಿಗಳ ಆರೋಗ್ಯ ಕಾಪಾಡಬೇಕು. ನನಗೆ ವಿಚಾರಣಾಧೀನ ಕೈದಿಗಳ ಆರೋಗ್ಯ ಬಹು ಮುಖ್ಯ ಎಂದು ಹುನಗುಂದ ಹೇಳಿದರು.
ಕೈದಿ ಮೊಹಮ್ಮದ್ ಫೈಜಲ್ ಅಳಲು ತೋಡಿಕೊಂಡರು. '11 ತಿಂಗಳಿಂದ ಜೈಲ್ನಲ್ಲಿದ್ದೇನೆ ಪೊಲೀಸರು ಇನ್ನೂ ಆರೋಪ ಪಟ್ಟಿ ಸಲ್ಲಿಸಿಲ್ಲ. ಜಾಮೀನು ಸಿಕ್ಕಿಲ್ಲ' ಎಂದರು. ಉತ್ತಮ ವಕೀಲರನ್ನು ನೇಮಿಸುವಂತೆ ಹುನಗುಂದ ಸೂಚಿಸಿದರು.
ಜೈಲ್ನಲ್ಲಿ 17 ವರ್ಷದ ಅಪ್ರಾಪ್ತ ಕೈದಿ ಇರುವುದು ಗಮನಕ್ಕೆ ಬಂದಿದೆ. ಅವನನ್ನು ಬಾಲಕರ ಕರೆಕ್ಷನ್ ಹೋಮ್ಗೆ ಸೇರಿಸುವಂತೆ ಹುನಗುಂದ ಜೈಲು ಅಧೀಕ್ಷಕರಿಗೆ ಸೂಚಿಸಿದರು.
ಮಹಿಳಾ ವಾರ್ಡ್ಗೆ ಹೋದಾಗ ಮುಮ್ತಾಜ್ ಸಮಸ್ಯೆ ಹೇಳಿಕೊಂಡರು. 'ಜೈಲ್ಗೆ ಬಂದು 4 ತಿಂಗಳಾಗಿದೆ, ಇನ್ನು ಬಿಡುಗಡೆ ಮಾಡಿಲ್ಲ. ತೊಡೆಯಲ್ಲಿ ದೊಡ್ಡ ಗಾಯವಾಗಿದೆ. ಅಪಘಾತ ಪ್ರಕರಣಕ್ಕೆ ನನ್ನನ್ನು ಬಂಧಿಸಿದ್ದಾರೆ' ಎಂದು ಹೇಳಿಕೊಂಡರು. ಈ ಬಗ್ಗೆ ಆಯೋಗ ಸದಸ್ಯರು ವಿಚಾರಣೆ ನಡೆಸಿದಾಗ ಮಹಿಳೆ ಆತ್ಮಹತ್ಯೆ ಪ್ರಯತ್ನಕ್ಕೆ ಜೈಲ್ನಲ್ಲಿದ್ದಾಳೆ. ಆದರೆ ಮನೆಯವರೇ ಈಕೆಗೆ ಜಾಮೀನು ನೀಡಲು ಹಿಂದೇಟು ಹಾಕುತ್ತಿರುವುದು ಬೆಳಕಿಗೆ ಬಂತು.
'ಅವಳಿಗೆ ಜಾಮೀನು ಸಿಗುವ ಏರ್ಪಾಡು ಮಾಡಿ' ಎಂದು ಜೈಲು ಅಧೀಕ್ಷಕ ದೊಡ್ಡ ಕಾಮಯ್ಯಗೆ ಹುನಗುಂದ ಸೂಚಿಸಿದರು.
ಮುಖ ಕಾಣುತ್ತಿಲ್ಲ!: ಸಂದರ್ಶನ ಹಾಲ್ನಲ್ಲಿ ಹಾಕಿರುವ ಕಬ್ಬಿಣ ತಡೆಗೋಡೆಯಿಂದಾಗಿ ಮುಖಪರಿಚಯ ಆಗುತ್ತಿಲ್ಲ ಎಂದು ಶರಣ್ ದೂರು ತೋಡಿಕೊಂಡರು. ಜೈಲು ವಿಸ್ತರಣೆ, ದುರಸ್ತಿ ಕಾಮಗಾರಿಗೆ 1 ಕೋಟಿ ಪ್ರಸ್ತಾಪ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಗುತ್ತಿಗೆ ಆಧಾರದಲ್ಲಿ ಫಾರ್ಮಸಿಸ್ಟ್, ವೈದ್ಯಾಧಿಕಾರಿ ನೇಮಿಸಿಕೊಳ್ಳುವಂತೆ ಸರ್ಕಾರದಿಂದ ಆದೇಶ ಬಂದಿದೆ ಎಂದು ದೊಡ್ಡಕಾಮಯ್ಯ ವಿವರಿಸಿದರು.
ಈಗಾಗಲೇ ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಇದ್ದು, ಐದು ಪ್ರಕರಣಗಳನ್ನು ಈ ಮೂಲಕ ವಿಚಾರಣೆ ಪ್ರಕ್ರಿಯೆ ನಡೆದಿದೆ ಎಂದರು. ಜೈಲ್ನಲ್ಲಿ ಒಟ್ಟು 289 ಕೈದಿಗಳಿದ್ದು, ಇದರಲ್ಲಿ 11 ಮಹಿಳೆಯರು. ಒಟ್ಟು 8 ಎಕರೆ ಜಾಗ ದಲ್ಲಿ ಜೈಲ್ ನಿರ್ಮಿಸಲಾಗಿದೆ ಎಂದು ಅಧೀಕ್ಷಕರು ಮಾಹಿತಿ ನೀಡಿದರು.
ಲೋಕೋಪಯೋಗಿ ಕಾರ್ಯಕಾರಿ ಎಂಜಿನಿಯರ್ ಬಿ.ಗೋಪಾಲ ನಾಯ್ಕ್, ಆರೋಗ್ಯಾಧಿಕಾರಿ ಒ.ಶ್ರೀರಂಗಪ್ಪ, ಜೈಲರ್ ವಿಜಯ ಕುಮಾರ್ ಡಿ.ಚೌಹಾಣ್, ಸೌಮ್ಯ ಇದ್ದರು.
ಕೈದಿಗಳಿಗೆ ನಿರಾಸೆ
ಹಿಂದಿನ ಬಾರಿ ಮಾನವ ಹಕ್ಕು ಆಯೋಗ ಅಧ್ಯಕ್ಷ ಎಸ್.ಆರ್. ನಾಯಕ್ ಬಂದು ಅಡುಗೆ ಕೋಣೆ ನೋಡಿ ಎಗರಾಡಿದ್ದರು.
ಅಡುಗೆಯನ್ನು ತಿನ್ನುವಂತೆ ಜೈಲ್ ಅಧೀಕ್ಷಕರಿಗೆ ಬೆದರಿಸಿದ್ದರು. ಇದು ಕೈದಿಗಳಿಗೆ ಖುಷಿ ಕೊಟ್ಟಿತ್ತು! ಕೈದಿಗಳ ಜತೆ ಹೆಚ್ಚು ಮಾತನಾಡಿದ್ದರು. ಆದರೆ ಶುಕ್ರವಾರ ಬಂದ ಆಯೋಗ ಸದಸ್ಯರು ಬೇಗನೆ ಹೋಗಿದ್ದಾರೆ ಎಂದು ನಿರಾಸೆ ತೋಡಿಕೊಂಡರು.