ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಮೀಕ್ಷೆಗೆ ಅಡ್ಡಿ: ದೂರು, ಪ್ರತಿದೂರು

Rashmi Kasaragodu
Updated On : 2 Mar 2013, 12:02 pm

ಉಪ್ಪಿನಂಗಡಿ: ಕೊಂಬಾರು ಗ್ರಾಪಂ ವ್ಯಾಪ್ತಿಯಲ್ಲಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ 2005ರ ಅಡಿಯಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಪಂಚ ವಾರ್ಷಿಕ ಮುನ್ನೋಟ ಯೋಜನೆ ತಯಾರಿಸುವ ಬಗ್ಗೆ ಸಮೀಕ್ಷೆ ನಡೆಸಲು ನಾಗರಿಕರು ಅಡ್ಡಿಪಡಿಸಿದ್ದಾರೆ ಎಂದು ಅಸ್ತ್ರ ಸಂಸ್ಥೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದೆ. ಇದಕ್ಕೆ ಪ್ರತಿಯಾಗಿ, ಪಂಚಾಯಿತಿ ಒಪ್ಪಿಗೆ ಇಲ್ಲದೆ ನಕ್ಸಲ್ ಪೀಡಿತ ಪ್ರದೇಶದಲ್ಲಿ ಅಪರಿಚಿತರ ಮನೆ ಭೇಟಿಗೆ ಅವಕಾಶವಿಲ್ಲ ಎಂದು ನಾಗರಿಕರು ವಾದಿಸಿ ಅಸ್ತ್ರ ಸಂಸ್ಥೆ ವಿರುದ್ಧ ದೂರು ಸಲ್ಲಿಸಿದ್ದಾರೆ. ಅಸ್ತ್ರ ಸಂಸ್ಥೆಯವರು ಕೊಂಬಾರು ಗ್ರಾ.ಪಂ.ನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಪಂಚವಾರ್ಷಿಕ ಮುನ್ನೋಟ ಯೋಜನೆ ತಯಾರಿಸಲು ಆಯ್ಕೆ ಮಾಡಿಕೊಂಡಿದ್ದು, ಗುರುವಾರ ಕೊಂಬಾರು ಗ್ರಾ.ಪಂ.ನಲ್ಲಿ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಅಸ್ತ್ರ ಸಂಸ್ಥೆಯ ಚಂದನ್ ಅವರ ಹೇಳಿಕೆಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ಬಳಿಕ ಚಂದನ್ ಕ್ಷಮೆ ಕೋರಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಶುಕ್ರವಾರ ಅಸ್ತ್ರ ಸಂಸ್ಥೆಯವರು ಸಮೀಕ್ಷೆ ಕಾರ್ಯಕ್ಕೆ ಮುಂದಾದಾಗ ಹಲವಾರು ಮಂದಿ ನಾಗರಿಕರು, ಜನ ಪ್ರತಿನಿಧಿಗಳೊಡಗೂಡಿ ಸಮೀಕ್ಷೆಗೆ ತಡೆಯೊಡ್ಡಿದ್ದಾರೆ. ನಕ್ಸಲ್ ಪೀಡಿತ ಪ್ರದೇಶವಾದ ಕೊಂಬಾರು ಶಿರಿಬಾಗಿಲಿಗೆ ಪಂಚಾಯಿತಿ ಒಪ್ಪಿಗೆ ವಿನಾ ಯಾರೂ ಅಪರಿಚಿತರು ಪ್ರವೇಶಿಸುವಂತಿಲ್ಲ ಎಂದು ತಾಕೀತು ಮಾಡಿದ್ದಾರೆ. ಉಪ್ಪಿನಂಗಡಿ ಪೊಲೀಸರು ಉಭಯ ಕಡೆಯ ದೂರು ಸ್ವೀಕರಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement