ಈಜಲು ತೆರಳಿದ ವಿದ್ಯಾರ್ಥಿ ಸಾವು
ಪರೀಕ್ಷೆ ಮುಗಿದ ಖುಷಿಗೆ ವಿಹಾರಕ್ಕೆ ತೆರಳಿದ್ದ ಗೆಳೆಯರು
ಮಂಗಳೂರು: ಪರೀಕ್ಷೆ ಮುಗಿದು ವೀಕೆಂಡ್ ವಿಹಾರಕ್ಕೆ ವಾಮಂಜೂರು ಅದ್ಯಪಾಡಿ ಅಣೆಕಟ್ಟು ಬಳಿ ಈಜಲು ಹೋದ ಎಸ್ಡಿಎ ಕಾಲೇಜು ವಿದ್ಯಾರ್ಥಿ ನೀರಲ್ಲಿ ಕೊಚ್ಚಿ ಹೋಗಿದ್ದಾನೆ. ಬರ್ಕೆಯ ನಿಹಾಲ್ ಬಂಗೇರ ಮೃತಪಟ್ಟವ. ಎಸ್ಡಿಎಂ ಕಾಲೇಜಿನಲ್ಲಿ ಬಿಬಿಎಂ ವಿದ್ಯಾರ್ಥಿ.
ಕೇಶವ ಬಂಗೇರ ಮತ್ತು ರತ್ನ ಬಂಗೇರ ದಂಪತಿ ಪುತ್ರ. ಶನಿವಾರ ಪರೀಕ್ಷೆ ಮುಗಿದಿತ್ತು. ಇದೇ ಖುಷಿಯಲ್ಲಿ ನಿಹಾಲ್ ತನ್ನ ಮೂವರು ಗೆಳೆಯರ ಬಳಗದ ಜತೆ ಅದ್ಯಪಾಡಿ ಡ್ಯಾಮ್ ಕಡೆ ಬೈಕ್ನಲ್ಲಿ ವಿಹಾರಕ್ಕೆ ತೆರಳಿದ್ದರು. ಅಲ್ಲಿ ನೀರಿಗಿಳಿದು ಈಜುತ್ತಿದ್ದರು. ನೀರಿನ ಸೆಳೆತಕ್ಕೆ ಸಿಕ್ಕಿ ನಿಹಾಲ್ ಕೊಚ್ಚಿಹೋಗಿದ್ದಾನೆ. ರಕ್ಷಣೆಗೆ ಮಾಡಿದ ಪ್ರಯತ್ನ ಫಲಿಸಲಿಲ್ಲ. ಕಾವೂರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳೀಯರ ಸಹಾಯದಿಂದ ಮೃತದೇಹ ಹುಡುಕಿ ಮೇಲೆತ್ತಲಾಯಿತು. ವೆನ್ಲಾಕ್ ಆಸ್ಪತ್ರೆ ಶವಾಗಾರದಲ್ಲಿ ಶವ ಪರೀಕ್ಷೆ ನಡೆಯಿತು.