ನಿಡ್ಡೋಡಿ ಸ್ಥಾವರ:ಕೆಜೆಪಿ ವಿರೋಧ
ಮಂಗಳೂರು: ನಿಡ್ಡೋಡಿಯಲ್ಲಿ ಸ್ಥಾಪನೆಯಾಗಲಿರುವ ಉಷ್ಣ ವಿದ್ಯುತ್ ಸ್ಥಾವರದಿಂದ ಸೋಮೇಶ್ವರ-ಮೂಲ್ಕಿ ಪ್ರದೇಶದ ಸಮುದ್ರದ ನೀರು ವಿಷಮಯವಾಗಿದ್ದು, ಸ್ಥಾವರ ಸ್ಥಾಪನೆಗೆ ಮೀನುಗಾರರು ಪರವಾಗಿ ಕರ್ನಾಟಕ ಜನತಾ ಪಕ್ಷ ವಿರೋಧ ವ್ಯಕ್ತಪಡಿಸಿದೆ. ಸುಮಾರು 4 ಸಾವಿರ ಎಕರೆ ಪ್ರದೇಶದಲ್ಲಿ 4 ಸಾವಿರ ಮೆಗಾ ವ್ಯಾಟ್ ಉಷ್ಣ ವಿದ್ಯುತ್ ಸ್ಥಾವರಕ್ಕೆ ಬೇಕಾಗುವ ನೀರಿನ ವ್ಯವಸ್ಥೆಯನ್ನು ಸಮುದ್ರದಿಂದಲೇ ಕಲ್ಪಿಸಬೇಕಾಗುತ್ತದೆ. ಇದರಿಂದ ಮುಂದೊಂದು ದಿನ ಜಿಲ್ಲೆಯ ಸಮುದ್ರ ಬಳಕೆಗೆ ಅನರ್ಹವೆಂದು 'ಡೆಡ್ ಸೀ' ಎಂಬುದಾಗಿ ಸರ್ಕಾರ ಘೋಷಣೆಯ ದುರಂತ ಸಂಭವಿಸಬಹುದು ಎಂದು ಕೆಜಿಪಿ ರಾಜ್ಯ ಕಾರ್ಯದರ್ಶಿ ರಾಮಚಂದರ್ ಬೈಕಂಪಾಡಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈಗಾಗಲೇ ಉಡುಪಿಯ ನಂದಿಕೂರಿನಲ್ಲಿರುವ ಉಷ್ಣ ವಿದ್ಯುತ್ ಸ್ಥಾವರದ ತ್ಯಾಜ್ಯದಿಂದ ಸಮುದ್ರ ಮಲೀನಗೊಂಡಿದ್ದು, ಮೀನುಗಾರರು ಕಂಗಲಾಗಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಮೀನುಗಾರಿಕೆ ನಂಬಿರುವ ಮೀನುಗಾರರ ಸಂಘಟನೆಗಳು, ಎಲ್ಲ ವರ್ಗದ ಜನರು ಸಂಘಟಿತರಾಗಿ ಸ್ಥಾವರದ ಸ್ಥಾಪನೆಯನ್ನು ತಡೆಗಟ್ಟುವಲ್ಲಿ ಹೋರಾಟ ನಡೆಸುವ ಅಗತ್ಯವಿದೆ ಎಂದರು.