ಸುದ್ದಿ ಸಂಕ್ಷೇಪ
ಇಂದು ಸಹಶಿಕ್ಷಕರ ಸಂಘದ ಸಭೆ
ಮಂಗಳೂರು: ಕರ್ನಾಟಕ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದ ಸಭೆ ಮಾ. 3 ರಂದು ಬೆಳಗ್ಗೆ 10ಕ್ಕೆ ಮೂಡುಬಿದಿರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಸಭೆಯಲ್ಲಿ 2008ರ ನಂತರ ನೇಮಕಾತಿ ಹೊಂದಿರುವ ಶಿಕ್ಷಕರ ವಿಶೇಷ ಭತ್ಯೆ ವಂಚಿತ ಪ್ರೌಢಶಾಲಾ ಶಿಕ್ಷಕರ ಸಮಸ್ಯೆಯ ಕುರಿತು ಚರ್ಚಿಸಲಾಗುತ್ತದೆ.
ಎಲ್ಲಾ ತಾಲೂಕು ಘಟಕದ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಟಿಜಿಟಿ, ಶಿಕ್ಷಕರು ಪಾಲ್ಗೊಳ್ಳಬಹುದು. ಸಭೆಯಲ್ಲಿ ವಿಶೇಷ ವೇತನ ಪಡೆಯುವ ಬಗ್ಗೆ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಗುವುದು ಎಂದು ಸಂಘದ ಜಿಲ್ಲಾ ಘಟಕ ಅಧ್ಯಕ್ಷ ರಾಮಮಕೃಷ್ಣ ಪೂನರೂರು ತಿಳಿಸಿದ್ದಾರೆ.
ಇಂದು 'ಪುರುಷ ಫೆಸ್ಟಿವಲ್'
ಮಂಗಳೂರು: ಶ್ರೀನಾಟ್ಯಾಂಜಲಿ ಕಲಾ ಅಕಾಡೆಮಿ ವತಿಯಿಂದ ಮಾ.3ರಂದು ನಗರದ ಪುರಭವನದಲ್ಲಿ 'ಪುರುಷ ಫೆಸ್ಟಿವಲ್' ಕಾರ್ಯಕ್ರಮ ದಿನಪೂರ್ತಿ ನಡೆಯಲಿದೆ ಎಂದು ಅಕಾಡೆಮಿ ನೃತ್ಯ ನಿರ್ದೇಶಕ ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ.ಚಂದ್ರಶೇಖರ ನಾವಡ ಹೇಳಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ ಪುರುಷರ ಶಾಸ್ತ್ರೀಯ ನೃತ್ಯ ವೈಭವ ನಡೆಯಲಿದೆ. ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಲಿದ್ದು, ದ.ಕ. ಮತ್ತು ಉಡುಪಿ ಜಿಲ್ಲೆಯ ಹಿರಿಯ ನೃತ್ಯಗುರುಗಳು ಪಾಲ್ಗೊಳ್ಳುವರು ಎಂದರು.
ಪುತ್ತೂರು: ಇಂದು, ನಾಳೆ ಕಂಬಳ
ಪುತ್ತೂರು: ಮಹಾಲಿಂಗೇಶ್ವರ ದೇವಾಲಯದ ಮುಂಭಾಗದ ಗದ್ದೆಯಲ್ಲಿ 21 ನೇ ವರ್ಷದ ಹೊನಲು ಬೆಳಕಿನ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಮಾ.3,4ರಂದು ಎಂದು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಗೌರವಾಧ್ಯಕ್ಷ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯ ಕರ್ನಾಟಕ ಸಂಘಟನೆ ಸ್ಥಾಪಕ ನೆಟ್ಟಾಳ ಮುತ್ತಪ್ಪ ರೈ ಸಾರಥ್ಯದಲ್ಲಿ ಈ ಕಂಬಳ ನಡೆಯುತ್ತಿದ್ದು, 3ರಂದು ಪೂರ್ವಾಹ್ನ 9.05ಕ್ಕೆ ಕಂಬಳದ ಉದ್ಘಾಟನೆ ನಡೆಯುವುದು. ಪುತ್ತೂರು ಮಹಾಲಿಂಗೇಶ್ವರ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಚುತ ಮೂಡಿತ್ತಾಯ ಉದ್ಘಾಟಿಸುವರು. ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಅಧ್ಯಕ್ಷತೆ ವಹಿಸುವರು ಎಂದರು. ಕಂಬಳ ಸಮಿತಿ ಅಧ್ಯಕ್ಷ ಎಸ್.ಚಂದ್ರಹಾಸ ಶೆಟ್ಟಿ, ಸಂಚಾಲಕ ಎನ್.ಸುಧಾಕರ ಶೆಟ್ಟಿ, ಕಾರ್ಯದರ್ಶಿ ಸತೀಶ್ ನಾಯ್ಕ್, ಕೋಶಾಧಿಕಾರಿ ಪ್ರಸನ್ನ ಶೆಟ್ಟಿ ಪಿ.ಎನ್ ಇದ್ದರು.
ಇಂದು 'ವಿಶಿಷ್ಟರಿಗಾಗಿ ಮೇಳ'
ಮಂಗಳೂರು: ಸೇವಾ ಭಾರತೀಯ ಅಂಗಸಂಸ್ಥೆ ಆಶಾಜ್ಯೋತಿ ವತಿಯಿಂದ ಮಾ.3 ರಂದು ಬೆಳಗ್ಗೆ 9 ರಿಂದ 5ರ ತನಕ ಡೊಂಗನಕೇರಿ ಕೆನರಾ ಪ್ರೌಢಶಾಲೆಯಲ್ಲಿ 'ವಿಶಿಷ್ಟರಿಗಾಗಿ ವಿಶಿಷ್ಟ ಮೇಳ' ನಡೆಯಲಿದೆ.
ಬೆಳಗ್ಗೆ 9ಕ್ಕೆ ಲೊಯೊಲಾ ಸಭಾಂಗಣದಿಂದ ಶೋಭಾಯಾತ್ರೆ ಹೊರಡಲಿದೆ. ಮೇಳದಲ್ಲಿ ವಿವಿಧ ಬಗೆಯ ಮನರಂಜನಾ ಆಟಗಳು, ತಿಂಡಿ ತಿನಿಸುಗಳ ಮಳಿಗೆಗಳು ಇರಲಿವೆ. ಸಮಾರಂಭದಲ್ಲಿ ವಿಭಿನ್ನ ಸಾಮರ್ಥ್ಯದ ಸುರೇಶ್ ಕುಮಾರ್ ಪುತ್ತೂರು ಇವರನ್ನು ಸನ್ಮಾನಿಸಲಾಗುವುದು ಎಂದು ಕಾರ್ಯಕರ್ತೆ ಸಾವಿತ್ರಿ ಎಸ್. ರಾವ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
6 ಚೀಲ ಅಡಕೆ ಕಳವು
ವಿಟ್ಲ: ಚೀಲದಲ್ಲಿ ತುಂಬಿಸಿಟ್ಟ 6 ಚೀಲ ಅಡಕೆ ಕಳವಾದ ಘಟನೆ ಶನಿವಾರ ಬೆಳಗ್ಗಿನ ಜಾವ ವಿಟ್ಲ ಸಮೀಪದ ಕಂಬಳಬೆಟ್ಟಿನ ಅರ್ಕೆಜಾರು ಎಂಬಲ್ಲಿ ನಡೆದಿದೆ. ಕಂಬಳಬೆಟ್ಟಿನ ಅರ್ಕೆಜಾರು ನಿವಾಸಿ ಅಬ್ಬೂಬಕ್ಕರ್ ಶುಕ್ರವಾರ ಸಂಜೆ ತನ್ನ ಮನೆಯ ಅಂಗಳದಲ್ಲಿದ್ದ ಅಡಕೆಯನ್ನು ಸುಮಾರು 10 ಚೀಲಕ್ಕೆ ತುಂಬಿಸಿ ಶನಿವಾರ ಅಟ್ಟಕ್ಕೆ ಹಾಕುವ ತಯಾರಿ ಮಾಡಿದ್ದರು.ರಾತ್ರಿ ಅಂಗಳದಲ್ಲಿದ್ದ 6 ಚೀಲಗಳನ್ನು ಸಾಗಾಟ ನಡೆಸಿದ ಕಳ್ಳರ ತಂಡ 4 ಚೀಲವನ್ನು ರಸ್ತೆ ಪಕ್ಕ ತಂದಿರಿಸಿದ ಸಂದರ್ಭ ರಸ್ತೆಯಲ್ಲಿ ಯಾರೋ ಸಂಚಾರ ನಡೆಸಿದ ಹಿನ್ನಲೆಯಲ್ಲಿ ಹೆದರಿ ಚೀಲಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಅಮೆರಿಕ ಬಗ್ಗೆ ಮಾಹಿತಿ ಬೇಕೇ? ವಿಡಿಯೋ ಕಾನ್ಫರೆನ್ಸ್ ಮಾಡಿ
ಮಂಗಳೂರು: ಅಮೆರಿಕ ಬಗ್ಗೆ ಹೆಚ್ಚಿನ ಮಾಹಿತಿಗೆ ವಿಡಿಯೋ ಕಾನ್ಫರೆನ್ಸ್ ಹಾಗೂ ಫೇಸ್ಬುಕ್ ಚಾಟ್ ಮೂಲಕ ಪಡೆದುಕೊಳ್ಳಬಹುದು ಎಂದು ಚೆನ್ನೈನಲ್ಲಿರುವ ಅಮೆರಿಕಾ ಕನ್ಸುಲೇಟ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಡೇವಿಡ್ ಗೈನರ್ ಹೇಳಿದ್ದಾರೆ. ನಗರದ ಸಿಟಿ ಸೆಂಟರ್ನಲ್ಲಿ ಶನಿವಾರ 'ಅಮೆರಿಕಾ ಅನುಭವ' ಕುರಿತ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಮೆರಿಕಾ ಕನ್ಸುಲೇಟ್ನಿಂದ 'ಅಮೆರಿಕಾ ಅನುಭವ' ಕಾರ್ಯಕ್ರಮವನ್ನು ಪ್ರಥಮ ಬಾರಿಗೆ ಮಂಗಳೂರಿನಲ್ಲಿ ಆಯೋಜಿಸಲಾಗಿದೆ. ಇಲ್ಲಿ ವ್ಯವಹಾರಿಕ, ಶೈಕ್ಷಣಿಕ ಹಾಗೂ ಪ್ರವಾಸೋದ್ಯಮ ದೃಷ್ಟಿಯಿಂದ ಹೆಚ್ಚಿನ ಉತ್ಸಾಹ ಕಂಡುಬಂದಿದೆ. ಮಣಿಪಾಲ ಮತ್ತು ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳು ಅಧ್ಯಯನ ಒಪ್ಪಂದ ಮಾಡಿಕೊಂಡಿವೆ. ಕೆನರಾ ಚೇಂಬರ್ ಔದ್ಯೋಗಿಕ ನೆರವು ಅಪೇಕ್ಷಿಸಿದೆ. ಇಂಥ ಕಾರ್ಯಕ್ರಮಗಳನ್ನು ರಾಜ್ಯದ ಬೇರೆ ಕಡೆಗಳಲ್ಲಿ ನಡೆಸಲಾಗುವುದು ಎಂದರು.
ಮಂಗಳೂರಿನಲ್ಲಿ ಮೂರು ದಿನಗಳ ಕಾಲ ನಡೆದ 'ಅಮೆರಿಕ ಅನುಭವ' ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನ ಸಿಕ್ಕಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ವಾಣಿಜ್ಯ ವ್ಯವಹಾರಗಳ ಸದಸ್ಯೆ ಜೂಡಿ ರಿಂಕಿ ಹೇಳಿದರು. ಇದೇ ಸಂದರ್ಭ ಅಮೆರಿಕನ್ ಲೈಬ್ರರಿ ಪ್ರದರ್ಶನ, ಫೇಸ್ಬುಕ್ ಖಾತೆ ಪರಿಚಯ, ಅಮೆರಿಕಾ ಮಾಹಿತಿ ಬಿಡುಗಡೆ, ಪ್ರವಾಸಿ ಗೈಡ್, ಮ್ಯಾಪ್ ಕ್ವಿಜ್, ಐಸ್ಕ್ರೀಮ್ ತಿನ್ನುವ ಸ್ಪರ್ಧೆ, ಕಾವ್ಯ ವಾಚನ ಸ್ಪರ್ಧೆ, ಅಮೆರಿಕದಲ್ಲಿ ಶಿಕ್ಷಣ ಮತ್ತು ವೀಸಾ ಮಾಹಿತಿ ಕಾರ್ಯಕ್ರಮ ನಡೆಯಿತು.
ಬಿಜೆಪಿಯ 6 ಮಂದಿ ಉಚ್ಚಾಟನೆ
ಮಂಗಳೂರು: ಮಂಗಳೂರು ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಬಂಡಾಯ ಸ್ಪರ್ಧಿಸುತ್ತಿರುವ 6 ಮಂದಿಯನ್ನು ಬಿಜೆಪಿ ಸಾಮಾನ್ಯ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಉಚ್ಛಾಟಿಸಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ ಆದೇಶ ಹೊರಡಿಸಿದ್ದಾರೆ. ರೇಣುಕ ಕುಂದರ್ ಬೋಳೂರು, ಪಾಲಿಕೆ ಮಾಜಿ ಸದಸ್ಯರಾದ ಪ್ರೇಮಾ ಮುರಳೀಧರ್ ಬೋಳಾರ್, ಮುರಳೀಧರ್ ಬೋಳಾರ್, ಎಂ.ರಾಜಶ್ರೀ ಮಧುಕರ್ ಜಪ್ಪಿನಮೊಗರು, ಶಕುಂತಳಾ ಡಿ. ಕರ್ಕೇರ, ರೇವತಿ ಪುತ್ರನ್ ಸುರತ್ಕಲ್ ಪಶ್ಚಿಮ ಇವರು ಬಿಜೆಪಿ ಉಚ್ಛಾಟಿತರು.
ಕಾಂಗ್ರೆಸ್ ಬಂಡುಕೋರರ ಉಚ್ಚಾಟನೆ
ಮಂಗಳೂರು: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಂಡುಕೋರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಜೇಮ್ಸ್ ಡಿಸೋಜ ಹಾಗು ದೇರೆಬೈಲು ವಾರ್ಡ್ ಮುರಳಿ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ರಮಾನಾಥ ರೈ ತಿಳಿಸಿದ್ದಾರೆ. ಜೇಮ್ಸ್ ಡಿಸೋಜ ವಿರುದ್ಧ ವಿಶ್ವಾಸ್ದಾಸ್ ಕೂಳೂರು ಅವರು ಜನಾರ್ದನ ಪೂಜಾರಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಮಾನಾಥ ರೈಗಳ ಬಳಿ ಶುಕ್ರವಾರ ದೂರು ನೀಡಿದ್ದರು. ಜೇಮ್ಸ್ ಡಿಸೋಜ 2008ರಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿಯಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಈ ಬಾರಿ ಬಿಜೆಪಿ ತ್ಯಜಿಸಿ, ಕಾಂಗ್ರೆಸ್ ಸೇರಿದ್ದರು. ಸೇರಿದ 4 ದಿನದಲ್ಲಿ ಉಚ್ಚಾಟನೆಯಾಗಿ ದಾಖಲೆ ಮಾಡಿದ್ದಾರೆ.
ಅಸೈಗೋಳಿ: ಇಂದು ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟ
ಮಂಗಳೂರು: ಬೆಳ್ಮ-ಕೊಣಾಜೆ ಪದ್ಮಶಾಲಿ ಸಮಾಜ ಸೇವಾ ಸಂಘದ ವತಿಯಿಂದ ಮಾ. 3 ರಂದು ಬೆಳಗ್ಗೆ 9.15ಕ್ಕೆ ಅಸೈಗೋಳಿ ಕೇಂದ್ರ ಮೈದಾನದಲ್ಲಿ ಜಿಲ್ಲಾಮಟ್ಟದ ಮುಕ್ತ ಕಬಡ್ಡಿ ಪಂದ್ಯಾಟ ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುತ್ತದೆ. ಪ್ರಥಮ ಬಹುಮಾನ- 15013, ಟ್ರೋಫಿ, ದ್ವಿ- 10013, ತೃ- 5013 ನೀಡಲಾಗುತ್ತದೆ. ಉತ್ತಮ ದಾಳಿಗಾರ, ಹಿಡಿತಗಾರ, ಸರ್ವಾಂಗೀಣ ಆಟಗಾರ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಘದ ಉಪಾಧ್ಯಕ್ಷ ಎಂ. ಜಯರಾಂ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಏನೆಕಲ್: ಇಂದು ವಾಲಿಬಾಲ್
ಸುಬ್ರಹ್ಮಣ್ಯ: ರೈತ ಯುವಕ ಮಂಡಲ ಏನೆಕಲ್ ಆಶ್ರಯದಲ್ಲಿ ಮಾ.3ರಂದು ಪುರುಷರ ಮುಕ್ತ ವಾಲಿಬಾಲ್ ಪಂದ್ಯಾಟ ಏನೆಕಲ್ನ ಅರ್ಪಣಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯಾಟವನ್ನು ಸುಳ್ಯ ತಾಲೂಕು ವಾಲಿಬಾಲ್ ಎಸೋಸಿಯೇಶನ್ ಅಧ್ಯಕ್ಷ ಸಂಶುದ್ದೀನ್ ಉದ್ಘಾಟಿಸಲಿದ್ದಾರೆ. ರಾಜ್ಯ ವಾಲಿಬಾಲ್ ಎಸೋಸಿಯೇಶನ್ ಉಪಾಧ್ಯಕ್ಷ ಜಯಪ್ರಕಾಶ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಸುಬ್ರಹ್ಮಣ್ಯ ರೋಟರಿ ಅಧ್ಯಕ್ಷ ಸೋಮಶೇಖರ ನಾಯಕ್, ಸುಬ್ರಹ್ಮಣ್ಯ ಕುಕ್ಕೆಶ್ರೀ ಜೇಸಿಸ್ ಅಧ್ಯಕ್ಷ ಚಂದ್ರಶೇಖರ ಚೆನ್ನಕಜೆ, ಉದ್ಯಮಿ ಕಿರಣ್ ಬುಡ್ಲೆಗುತ್ತು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮರಕಡ: ಇಂದು ಆರೋಗ್ಯ ಉಚಿತ ತಪಾಸಣೆ ಶಿಬಿರ
ಮಂಗಳೂರು: ಎ.ಜೆ. ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಮಹಾ ವಿದ್ಯಾಲಯ ವತಿಯಿಂದ ಮಾ. 3 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 12.30ರ ತನಕ ಮರಕಡ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ 'ಉಚಿತ ಆರೋಗ್ಯ ತಪಾಸಣೆ ಹಾಗೂ ದಂತಚಿಕಿತ್ಸಾ ಶಿಬಿರ' ನಡೆಯಲಿದೆ. ಮಹಿಳೆಯರು ತಮ್ಮ ಆರೋಗ್ಯದ ಕುರಿತು ಮುಕ್ತವಾಗಿ ತಪಾಸಣೆ ನಡೆಸಲು ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಪೆಡಿಯಾಟ್ರಿಕ್ಸ್ ವಿಭಾಗ ಮುಖ್ಯಸ್ಥ ಡಾ. ಸಂತೋಷ್ ಟಿ. ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ದಂತ ಚಿಕಿತ್ಸೆಯ ಕುರಿತು ಮಾಹಿತಿ ನೀಡಲಾಗುತ್ತದೆ. ಬಾಯಿ, ಹಲ್ಲುಗಳ ತಪಾಸಣೆ, ಶುಚಿತ್ವ, ಹುಳುಕುಗಳನ್ನು ಭರ್ತಿ ಮಾಡುವುದು. ಕೃತಕ ಹಲ್ಲು ಜೋಡಣೆ, ಬಾಯಿ ಮತ್ತು ಮುಖಾಂಗದ ಶಸ್ತ್ರ ಚಿಕಿತ್ಸೆ ಕುರಿತು ತಪಾಸಣೆ ಮಾಡಲಾಗುವುದು ಎಂದು ದಂತ ವೈದ್ಯೆ ಡಾ. ವಿಜಯ ಹೆಗ್ಡೆ ಹೇಳಿದರು. ಗೋಷ್ಠಿಯಲ್ಲಿ ಒಬಿಜಿ ವಿಭಾಗದ ಪ್ರಾಧ್ಯಾಪಕ ಡಾ. ಮಂಜುನಾಥ್ ಕಾಮತ್, ಮೆಡಿಕಲ್ ಅಧಿಕಾರಿ ಡಾ. ಯೋಗಿಶ್ ಇದ್ದರು.
ಇಂದು ಚುನಾವಣೆ ತರಬೇತಿ
ಮಂಗಳೂರು: ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತಗಟ್ಟೆ ಅಧಿಕಾರಿಗಳ ತರಬೇತಿಯು ಮಾ.3 ರಂದು ರೊಸಾರಿಯೋ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ. ತರಬೇತಿಗೆ ತಪ್ಪದೆ ಹಾಜರಾಗುವಂತೆ ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.