ಚುನಾವಣಾ ವೀಕ್ಷಕ ಎ.ಕೆ. ಮೊನ್ನಪ್ಪ
ಮಂಗಳೂರು: ರಾಜ್ಯ ಚುನಾವಣಾ ಆಯೋಗ ಮಹಾನಗರ ಪಾಲಿಕೆಯ ನಗರ ಸ್ಥಳೀಯ ಚುನಾವಣೆಯ ಚುನಾವಣಾ ವೀಕ್ಷಕರಾಗಿ ಹಟ್ಟಿ ಚಿನ್ನದ ಗಣಿ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಎ.ಕೆ. ಮೊನ್ನಪ್ಪ ನೇಮಕಗೊಳಿಸಿದೆ. ಅಭ್ಯರ್ಥಿಗಳು, ಸಾರ್ವಜನಿಕರು ಚುನಾವಣೆಗೆ ಸಂಬಂಧಪಟ್ಟ ಯಾವುದೇ ದೂರು ಅಹವಾಲುಗಳನ್ನು ಸಂಜೆ 4 ರಿಂದ 5ರೊಳಗೆ ಪಾಲಿಕೆಯ ಕೇಂದ್ರ ಕಚೇರಿ ಆಡಳಿತಾಧಿಕಾರಿ ಕೊಠಡಿಯಲ್ಲಿ ಸಲ್ಲಿಸಬಹುದು. ಇನ್ನಿತರ ಸಮಯದಲ್ಲಿ ಚುನಾವಣಾ ವೀಕ್ಷಕರ ಸಂಪರ್ಕಾಧಿಕಾರಿ ಮಂಜುನಾಥ್ ಆರ್. ಶೆಟ್ಟಿ- 9743559156 ಸಂಪರ್ಕಿಸಬಹುದು.
ಅನುಮತಿ ಇಲ್ಲದ ಪಕ್ಷದ ಜಾಹೀರಾತು ವಿರುದ್ಧ ಕ್ರಮ
ಮಂಗಳೂರು: ಜಿಲ್ಲಾ ಮಾಧ್ಯಮ ಸಮಿತಿಯ ಅನುಮತಿ ಇಲ್ಲದೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಜಾಹೀರಾತುಗಳು ಮಾಧ್ಯಮದಲ್ಲಿ ಪ್ರಕಟಗೊಳ್ಳುತ್ತಿದೆ. ಈ ಬಗ್ಗೆ ಮೌಖಿಕ ದೂರು ಬಂದಲ್ಲಿ ಅಕ್ರಮ ಜಾಹೀರಾತು ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಸಮಿತಿ ಸಂಚಾಲಕರು ಸ್ಪಷ್ಟಪಡಿಸಿದ್ದಾರೆ.
ಇದಲ್ಲದೆ ಚುನಾವಣಾ ತರಬೇತಿಗೆ ಹಾಜರಾಗದ ಮತಗಟ್ಟೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಖರ್ಚುವೆಚ್ಚದ ವಿವರ ಸಲ್ಲಿಸಿಲ್ಲ: ನಗರ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಮಾ. 5ರೊಳಗೆ ಚುನಾವಣೆಗೆ ಸಂಬಂಧಿಸಿದ ಖರ್ಚು ವೆಚ್ಚ ವಿವರಗಳನ್ನು ಪಾಲಿಕೆಯ ಲೆಕ್ಕ ಪರಿಶೋಧಕರಿಗೆ ಸಲ್ಲಿಸಲು ತಿಳಿಸಿದ್ದು, ಶೇ. 40 ಚುನಾವಣಾ ಅಭ್ಯರ್ಥಿಗಳಿಂದ ವಿವರಗಳು ಬಂದಿದೆ.
ವಿವರ ಸಲ್ಲಿಸದ ಅಭ್ಯರ್ಥಿಗಳ ನಾಮಪತ್ರ ವಜಾಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಲೆಕ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.