ಜನದ್ರೋಹಿ ಬಿಜೆಪಿಯನ್ನು ತಿರಸ್ಕರಿಸಿ: ಪೂಜಾರಿ
ಸುಳ್ಯ: ಬಿಜೆಪಿ ಆಡಳಿತದಲ್ಲಿ ಪೌರಾಡಳಿತವನ್ನು ಧ್ವಂಸ ಮಾಡುವ ಪ್ರಕ್ರಿಯೆ ನಡೆದಿದೆ. ರಾಜ್ಯದಲ್ಲಿ ಬಿಜೆಪಿಯವರು ತಮ್ಮ ದುರಾಡಳಿತದಿಂದ ಹೇಗೆ ಜನದ್ರೋಹ ಮಾಡುತ್ತಿದ್ದಾರೋ ಅದೇ ರೀತಿ ಇಲ್ಲೂ ಬಿಜೆಪಿಯವರು ಆಲೋಚಿಸುವ ಶಕ್ತಿಯನ್ನೇ ಕಳೆದುಕೊಂಡು ಜನದ್ರೋಹಿ ಆಡಳಿತ ನೀಡುತ್ತಿದ್ದಾರೆ. ಇಂತಹವರನ್ನು ಮುಂದಿನ ಚುನಾವಣೆಯಲ್ಲಿ ಜನ ತಿರಸ್ಕರಿಸಬೇಕು ಎಂದು ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದ್ದಾರೆ.
ಸುಳ್ಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭವಿಷ್ಯದಲ್ಲಿ ಕಾಂಗ್ರೆಸ್ ನೇತೃತ್ವದಲ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ. ಆಗ ಪೌರಾಡಳಿತಗಳಿಗೆ ಹೊಸ ಸ್ಪಂದನೆ ದೊರೆಯಲಿದೆ ಎಂದರಲ್ಲದೆ, ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಂತರಂಗದ ಅಲೆ ಹರಿಯುತ್ತಿದ್ದು ಕಾಂಗ್ರೆಸ್ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಅಧಿಕಾರ ಹಿಡಿಯುತ್ತದೆ ಎಂದು ಹೇಳಿದರು.
ಪಾದಯಾತ್ರೆ: ಸುಳ್ಯ ನಗರ ಪಂಚಾಯತ್ ಚುನಾವಣೆಗೆ ಪೂರ್ವಭಾವಿಯಾಗಿ ಭಾನುವಾರ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಹಾಗೂ ಎ.ಐ.ಸಿ.ಸಿ ಕಾರ್ಯದರ್ಶಿ ವಿನಯಕುಮಾರ್ ಸೊರಕೆ ಸುಳ್ಯದಲ್ಲಿ ಪಾದಯಾತ್ರೆ ನಡೆಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು.