ನಾನು ತಪ್ಪಿತಸ್ಥನಲ್ಲ: ರಾಜ್ಯಪಾಲರಿಗೆ ಪತ್ರ
ಮಂಗಳೂರು: ಮಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯೊಬ್ಬ 'ಯವತಿ ಅಪಹರಣ ಮತ್ತು ಮತಾಂತರ ಕೇಸ್ನಲ್ಲಿ ನನ್ನನ್ನು ಸಿಲುಕಿಸಿ ವೃಥಾ ಕೇಸು ದಾಖಲಿಸಲಾಗಿದೆ' ಎಂದು ರಾಜ್ಯಪಾಲ ಹಾಗೂ ಹೈಕೋರ್ಟ್ಗೆ ಪತ್ರ ಬರೆದ ಘಟನೆ ಭಾನುವಾರ ನಡೆದಿದೆ. ಯುವತಿಯನ್ನು ಅಪಹರಿಸಿ, ಮತಾಂತರಕ್ಕೆ ಯತ್ನಿಸಿ ಆರೋಪಿ ಪರಾರಿಗೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ಪುತ್ತೂರಿನ ನ್ಯಾಯವಾದಿ, ನೋಟರಿ, ಕಾಂಗ್ರೆಸ್ ಅಲ್ಪಸಂಖ್ಯಾತ ಜಿಲ್ಲಾ ಮುಖಂಡ ನೂರುದ್ದೀನ್ ಸಾಲ್ಮರ ಸಹಿತ ಮೂವರನ್ನು ಗ್ರಾಮಾಂತರ ಪೊಲೀಸರು ಶನಿವಾರ ಬಂಧಿಸಿದ್ದರು. ಬಂಧಿತ ಆರೋಪಿಗಳಿಗೆ ಪುತ್ತೂರು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು. ಭಾನುವಾರ ಬೆಳಗ್ಗೆ 9.30ರ ಸುಮಾರಿಗೆ ಬಂಧಿತ ಆರೋಪಿ ನೂರುದ್ದೀನ್ ಸಾಲ್ಮರ, ನನ್ನನ್ನು ವಿನಾ ಕಾರಣ ಬಂಧಿಸಲಾಗಿದೆ. ಪ್ರಕರಣದಲ್ಲಿ ತನ್ನದೇನು ತಪ್ಪಿಲ್ಲ ಎಂದು ವಾದಿಸುತ್ತಾ, ತನ್ನ ಸಹಚರರ ಜತೆ ಜೈಲಿನಲ್ಲಿ ಉಪವಾಸ ಪ್ರತಿಭಟನೆಗೆ ಮುಂದಾಗಿದ್ದಾನೆ. ಅಷ್ಟರಲ್ಲಿ ಜೈಲಧಿಕಾರಿಗಳು ಮಧ್ಯ ಪ್ರವೇಶಿಸಿ, ಪ್ರಕರಣ ದಾಖಲಾಗಿರುವುದರಿಂದ ನಾವೇನೂ ಮಾಡುವಂತಿಲ್ಲ. ಜೈಲಿನ ನಿಯಮ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು. ಬಳಿಕ 'ನಾನೇನೂ ತಪ್ಪು ಮಾಡಿಲ್ಲ. ತನ್ನನ್ನು ವೃಥಾ ಪ್ರಕರಣದಲ್ಲಿ ಸಿಲುಕಿಸಲಾಗಿದೆ' ಎಂಬ ಒಕ್ಕಣೆಯುಳ್ಳ ಪತ್ರವನ್ನು ಜೈಲಧಿಕಾರಿಗಳಿಗೆ ನೀಡಿದ್ದು, ಆತನ ಬೇಡಿಕೆಯಂತೆ ಪತ್ರವನ್ನು ರಾಜ್ಯಪಾಲರು ಮತ್ತು ಹೈಕೋರ್ಟ್ಗೆ ಕಳುಹಿಸುವುದಾಗಿ ಜೈಲಧಿಕಾರಿಗಳು ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.