ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನೋವು ಮರೆತರು, ನಕ್ಕು ನಲಿದರು..

Lingaraj Badiger
Updated On : 4 Mar 2013, 12:43 pm

ಮಂಗಳೂರು: ಎಲ್ಲರಂತೆ ನಾವಲ್ಲ ಎಂಬ ಬವಣೆ, ಹೆತ್ತವರಿಗೂ ತಪ್ಪದ ಕೊರಗು.. ಇದು ಶಾಶ್ವತ ಎಂದು ಗೊತ್ತಿದ್ದೂ ಕ್ಷಣ ಕಾಲ ಮರೆತರು, ಎಲ್ಲ ನೋವುಗಳಿಗೆ ಅಲ್ಲಿತ್ತು ನಲಿವಿನ ಮದ್ದು. ಹೆತ್ತವರೊಂದಿಗೆ ಬೆರತು, ಹೆತ್ತವರೂ ಮಕ್ಕಳೊಂದಿಗೆ ಸಮ್ಮಿಲನಗೊಂಡು ನಲಿದರು... ನಲಿದಾಡಿದರು... ಮೆರೆದರು.
ಇಬ್ಬರೂ ಇಷ್ಟಬಂದಲ್ಲಿಗೆ ಸುತ್ತಿದರು, ಇನ್ನೂ ಕೆಲವರು ಅಮ್ಮನ ಸೆರಗು ಸುತ್ತಿಕೊಂಡರು, ಅತ್ತುಕೊಂಡರು, ಎತ್ತಿಕೊಂಡರು... ಈ ಎಲ್ಲ ಬೇಸರ, ದುಗುಡ, ದುಮ್ಮಾನಗಳನ್ನು ಹೋಗಲಾಡಿಸಿ ಸಂತಸ, ಸಂಭ್ರಮ ಹಂಚುವ ವಿಶಿಷ್ಟರ ವಿಶಿಷ್ಟ ಮೇಳ ಎಲ್ಲರನ್ನೂ ಒಂದೇ ವೇದಿಕೆಗೆ ಕರೆತಂದಿತ್ತು.
ಮಂಗಳೂರಿನ ಸೇವಾ ಭಾರತಿಯ ಅಂಗ ಸಂಸ್ಥೆ ಆಶಾಜ್ಯೋತಿಯ ಅಶಕ್ತ ಮಕ್ಕಳ ಮತ್ತು ಹೆತ್ತವರ ವೇದಿಕೆ ಭಾನುವಾರ ನಗರದ ಡೊಂಗರಕೇರಿ ಕೆನರಾ ಹೈಸ್ಕೂಲ್ ವಠಾರದಲ್ಲಿ ಏರ್ಪಡಿಸಿದ ವಿಶೇಷ ಮಕ್ಕಳ ವಾರ್ಷಿಕ ಮೇಳದ ಜಾತ್ರೆಯ ತುಣುಕು ಇದು.
ಈ ಬಾರಿ ಕುದುರೆ ಸವಾರಿ: ಕಳೆದ ವರ್ಷ ಒಂಟೆ ಸವಾರಿ ಖುಷಿ ಅನುಭವಿಸಿದ ಮಕ್ಕಳು ಈ ಸಲ ಕುದುರೆ ಸವಾರಿ ಮೋಜು ಪಡೆದರು.
    ಪಣಂಬೂರು ಬೀಚ್ ಸವಾರಿಯ ಒಂಟೆ ಜತೆಗೆ ಕುದುರೆ ಸವಾರಿಯ ಅನುಭವವ ವಿಶೇಷ ಮಕ್ಕಳಿಗೆ ದಕ್ಕಿತು. ಜಾರುಬಂಡಿ, ತಿರುಗುವ ತೊಟ್ಟಿಲು, ತಿರುಗುವ ಕೀಲು ಕುದುರೆ, ಕಣ್ಣಿಗೆ ಬಟ್ಟೆಕಟ್ಟಿ ಹಣೆಗೆ ತಿಲಕ ಇಡುವುದು, ರಿಂಗ್ ಎಸೆತ ಇತ್ಯಾದಿ ನಾನಾ ಸ್ಪರ್ಧೆಗಳು ಮಕ್ಕಳನ್ನು ಪುಳಕಿತಗೊಳಿಸಿತು. ಜತೆಯಲ್ಲಿ ಹೊಟ್ಟೆ ತಣಿಸಲು ಐಸ್‌ಕ್ರೀಮ್, ಕಲ್ಲಂಗಡಿ ಹಣ್ಣು, ಪಾನಿಪೂರಿ, ಬಾಳೆಹಣ್ಣು, ಲಸ್ಸಿ, ಮಜ್ಜಿಗೆ ಹೀಗೆ ತರಹೇವಾರಿ ತಿಂಡಿ ತಿನಿಸುಗಳು ಇದ್ದವು. ವಿಶೇಷ ಮಕ್ಕಳ ಕಣ್ಣಿನ ತಪಾಸಣೆಯೂ ಇತ್ತು. ಸಂಜೆ 4 ಗಂಟೆವರೆಗೆ ಬ್ಯಾಂಡ್ ವಾದನಕ್ಕೆ ವಿಶೇಷ ಮಕ್ಕಳು ನೃತ್ಯ ಮಾಡಿ ಸಂತಸ ಪಟ್ಟರು.
ಬೆಳಗ್ಗೆ ಕಾರ್ಪೊರೇಷನ್ ಬ್ಯಾಂಕ್ ಜಿಎಂ ಸಿ.ಜಿ.ಪಿಂಟೋ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನೆಯಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಉಪನಿರ್ದೇಶಕಿ ಶಕುಂತಳಾ, ಇಂಡಿಯಾನ ಆಸ್ಪತ್ರೆ ಅಧ್ಯಕ್ಷ ಡಾ.ಆಲಿ ಕುಂಬ್ಳೆ, ಸಾಗರ್ ರಿಯಾಲಿಟಿ  ಪ್ರೊಪೋಷನ್ಸ್ ಮುಖ್ಯಸ್ಥ ಗಿರಿಧರ್ ಶೆಟ್ಟಿ, ಸೇವಾ ಭಾರತಿ ವಿಶ್ವಸ್ಥ ಡಾ.ಜಿ.ಎನ್.ಭಟ್, ಕಾರ್ಯದರ್ಶಿ ಡಾ.ಮುರಳೀಧರ ನಾಯಕ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement