ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

1.5 ಸೆಂಟ್ಸ್ ಜಾಗದಲ್ಲೂ ಮನೆ ಕಟ್ಟಬಹುದು!

Lingaraj Badiger
Updated On : 5 Mar 2013, 11:57 am

ಮಂಗಳೂರು: ಮಹಾನಗರ ವ್ಯಾಪ್ತಿಯಲ್ಲಿ 3 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಆದರೆ ನಗರದಲ್ಲಿ 1.5 ಸೆಂಟ್ಸ್ ಜಾಗ ಇದ್ದವರೂ ಮನೆಕಟ್ಟಬಹುದು ಎಂದು ಶಾಸಕ ಕೃಷ್ಣ ಜೆ.ಪಾಲೆಮಾರ್ ಹೇಳಿದರು.
ಯಾರಿಗಾದರೂ ಮನೆ ಕಟ್ಟಲು ಅವಕಾಶ ನೀಡಿಲ್ಲ ಎಂದು ಹೇಳಿದ್ದರೆ ಬಂದು ಹೇಳಲಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು. ಹಾಗೆ ನೋಡಿದರೆ ಹಿಂದಿನ ನಗರಯೋಜನೆಯ ಸಿಡಿಪಿಯಂತೆ ಮನೆಗಳನ್ನು ಕಟ್ಟಲು ಸಾಧ್ಯವೇ ಇರಲಿಲ್ಲ. ಮಂಗಳೂರಲ್ಲಿ ಕ್ರಮಬದ್ಧವಾಗಿ ನಿರ್ಮಿಸಿದ ಲೇ ಔಟ್‌ಗಳು ಹೆಚ್ಚೆಂದರೆ ಹತ್ತಿಪ್ಪತ್ತು ಇರಬಹುದು. ಉಳಿದೆಲ್ಲವೂ ಹಿಂದಿನ ಅಧಿಕಾರಿಗಳು ಕಾನೂನು ಬಲ ಪ್ರಯೋಗಿಸದೆ ಮೌಖಿಕ ಸಮ್ಮತಿ ಸೂಚಿಸಿದ ಪರಿಣಾಮ ನಿರ್ಮಾಣಗೊಂಡಿದೆ. ಅಂತಹ ಮನೆಗಳನ್ನು ಕೋರ್ಟ್‌ಗೆ ಹೋದರೆ ಕೆಡಹುವ ಸಂದರ್ಭ ಬರಬಹುದು. ಅದಕ್ಕಾಗಿ ಪಾಲಿಕೆಯಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಕಾನೂನುಬದ್ಧವಾಗಿ ಮನೆ ನಿರ್ಮಿಸಲು ಸೆಟ್‌ಬ್ಯಾಕ್ ಮತ್ತು ರಸ್ತೆಗೆ ಜಾಗ ಸಹಿತ ಮನೆ ನಿರ್ಮಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು. ಮಹಾನಗರದಲ್ಲಿ 500 ಕೋಟಿ ಕಾಮಗಾರಿ ನಡೆದಿದೆ, ಕೇಂದ್ರ ಸರ್ಕಾರದ ಜುಜುಬಿ 3 ಕೋಟಿ ಯಾವ ಲೆಕ್ಕ ಎಂದು ಲೇವಡಿಮಾಡಿದರು. ಸುದ್ದಿಗೋಷ್ಠಿಯಲ್ಲಿ ಮೂಡಾ ಅಧ್ಯಕ್ಷ ರಮೇಶ್ ಕುಮಾರ್, ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಇದ್ದರು.
ಅನುಮತಿ ಇಲ್ಲದೆ ಜಾಹೀರಾತು
6 ಅಭ್ಯರ್ಥಿಗಳಿಗೆ ನೋಟಿಸ್
ಮಂಗಳೂರು: ಮಾಧ್ಯಮ ಸಮಿತಿ ಅನುಮತಿ ಪಡೆಯದೆ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಹಾಗೂ ಬಿಜೆಪಿ ಪಕ್ಷದ ಕಾರ್ಯದರ್ಶಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ ನೋಟಿಸ್ ಕಳುಹಿಸಿದ್ದಾರೆ. ಅಪರ ಜಿಲ್ಲಾಧಿಕಾರಿ, ಮಾಧ್ಯಮ ಸಮಿತಿ ಸಂಚಾಲಕ ಎ.ದಯಾನಂದ್ ನೋಟಿಸ್ ಜಾರಿ ಮಾಡಿದ್ದು, 24 ಗಂಟೆ ಒಳಗೆ ಉತ್ತರಿಸುವಂತೆ ಸೂಚಿಸಿದ್ದಾರೆ. ಅನುಮತಿ ಹೊರತಾಗಿ ವೈಯಕ್ತಿಕ ಜಾಹೀರಾತು ನೀಡಿದ ಗಣೇಶ್, ರಾಜೇಶ್ ಕುಳಾಯಿ, ಭಾಸ್ಕರಚಂದ್ರ ಶೆಟ್ಟಿ, ಶಶಿಧರ ಹೆಗ್ಡೆ, ಲೇನ್ಸ್ ಲೋಟ್ ಪಿಂಟೊ, ಮೋಹನ್ ಪಡೀಲ್‌ಗೆ ನೋಟಿಸ್ ನೀಡಲಾಗಿದೆ.
ಪ್ರಚಾರಕ್ಕೆ ಧರ್ಮಗುರು
ಬಳಕೆಗೆ ಕಾಂಗ್ರೆಸ್ ಆಕ್ಷೇಪ
ಮಂಗಳೂರು: ಚುನಾವಣೆ ಪ್ರಚಾರಕ್ಕೆ ಮುಸ್ಲಿಂ ಧರ್ಮಗುರುಗಳನ್ನು ಬಳಸಿಕೊಳ್ಳುವುದು ಸರಿಯಲ್ಲ, ಚುನಾವಣೆ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸೆಂಟ್ರಲ್ ಮುಸ್ಲಿಂ ಸಮಿತಿ ರಾಜ್ಯಾಧ್ಯಕ್ಷ ಕೆ.ಎಂ.ಎಸ್.ಮಸೂದ್ ಹೇಳಿದರು. ಪುತ್ತೂರಿನಲ್ಲಿ ಎಸ್‌ಡಿಪಿಐ ಸಂಘಟನೆ ಪ್ರಚಾರಕ್ಕೆ ಮುಸ್ಲಿಂ ಧರ್ಮಗುರು ಬಳಸಿಕೊಂಡಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಎಲ್ಲೆಡೆ ಕಾಂಗ್ರೆಸ್ ಪರ ಒಲವು ಕಂಡುಬರುತ್ತಿದ್ದು, ಅಲ್ಪಸಂಖ್ಯಾತರು ಒಟ್ಟಾಗಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಯು.ಟಿ.ಖಾದರ್, ಇಬ್ರಾಹಿಂ ಕೋಡಿಜಾಲ್, ಅಶ್ರಫ್, ಮೊಯ್ದಿನ್ ಬಾವ ಇದ್ದರು.
ಮೂಲ ಸೌಕರ್ಯಕ್ಕೆ ಆದ್ಯತೆ: ನಾಗರಾಜ ಶೆಟ್ಟಿ ಭರವಸೆ
ಬಂಟ್ವಾಳ: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಲು ಮೊದಲ ಆದ್ಯತೆ ನೀಡುವುದರ ಜೊತೆಗೆ, ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಶ್ರಮಿಸುವುದಾಗಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಿ. ನಾಗರಾಜ ಶೆಟ್ಟಿ ಭರವಸೆ ನೀಡಿಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುರಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿತದಿಂದ ಬೇಸತ್ತ ಜನತೆ ಜೆಡಿಎಸ್‌ನತ್ತ ಒಲವು ತೋರುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಬಂಟ್ವಾಳ ಪುರಸಭೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಸೌಂದರ್ಯ ರಮೇಶ್, ಪುಷ್ಪರಾಜ ಶೆಟ್ಟಿ, ಕೃಷ್ಣಪ್ಪ ಪೂಜಾರಿ, ಮೊಹಮ್ಮದ್ ಶಾಫಿ, ಪಿ.ಎ. ರಹೀಂ, ಅಬೂಬಕ್ಕರ್ ಅಮ್ಮುಂಜೆ ಹಾಗೂ ಪಕ್ಷದ ಅಭ್ಯರ್ಥಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement