13 ಉಪನ್ಯಾಸಕರಿಗೆ ಶೋಕಾಸ್ ನೋಟಿಸ್
ಮಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆ ಸಂಬಂಧ ಕರ್ತವ್ಯಕ್ಕೆ ಮತಗಟ್ಟೆ ಅಧಿಕಾರಿಗಳಾಗಿ ನೇಮಿಸಿದ ಪದವಿಪೂರ್ವ ಕಾಲೇಜಿನ 13 ಉಪನ್ಯಾಸಕರು ತರಬೇತಿಗೆ ಗೈರು ಹಾಜರಾಗಿದ್ದಾರೆ. ಚುನಾವಣೆ ಕರ್ತವ್ಯ ಉಲ್ಲಂಘಿಸಿದ ಅವರಿಗೆ ಜಿಲ್ಲಾಧಿಕಾರಿ ಎನ್.ಪ್ರಕಾಶ್ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.
6ರಂದು ಅರವಿಂದ ಜೋಶಿ ಸಂಸ್ಮರಣೆ
ಮೂಲ್ಕಿ: ಮೂಲ್ಕಿಯ ವಿಜಯ ಕಾಲೇಜಿನ ಮಾಜಿ ಪ್ರಾಚಾರ್ಯ ಎಸ್. ಅರವಿಂದ ಜೋಶಿ ಅವರ ಸಂಸ್ಮರಣೆ ಕಾರ್ಯಕ್ರಮ ಮಾ.6ರಂದು ಮಧ್ಯಾಹ್ನ ಮೂಲ್ಕಿಯ ವಿಜಯ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಜರುಗಲಿದೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಹಾಯಕ ಆಯುಕ್ತ ಎಂ. ಸರ್ವೋತ್ತಮ ಅಂಚನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ಎ.ಆರ್. ಕುಡ್ವ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಟಿವಿ, ಕ್ಯಾಮೆರಾ ಕಳವು
ಮಂಗಳೂರು: ಬಿಜೈ ಕಾಪಿಕಾಡ್ ಎಲೆಕ್ಟ್ರಾನಿಕ್ ಮಳಿಗೆಗೆ ನುಗ್ಗಿದ ಕಳ್ಳರು 53 ಸಾವಿರ ಬೆಲೆಬಾಳುವ ಸೊತ್ತುಗಳನ್ನು ದೋಚಿದ್ದಾರೆ. ಭಾನುವಾರ ರಾತ್ರಿ ಸೋಮವಾರ ಬೆಳಗ್ಗಿನ ಜಾವದ ನಡುವೆ ಕಳ್ಳರು ಶಟರ್ ಮುರಿದು ಒಳಪ್ರವೇಶಿಸಿ ಎಲ್‌ಸಿಡಿ ಟಿವಿ, ಕ್ಯಾಮೆರಾ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ಮಳಿಗೆ ಮಾಲೀಕ ದಿವಾಕರ ಉರ್ವ ಪೊಲೀಸರಿಗೆ ದೂರು ನೀಡಿದ್ದಾರೆ.
ಮನೆ ಕೆಲಸದಾಕೆ ಸೆರೆ
ಮಂಗಳೂರು: ಮಾಲೀಕನ ಮನೆಯಿಂದ ಚಿನ್ನಾಭರಣ ಕದ್ದ ಮನೆಗೆಲಸದಾಕೆಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಕುಂಜತ್ತಬೈಲ್ ರಾಧ (27) ಬಂಧಿತೆ. 40 ಗ್ರಾಂ ಚಿನ್ನದ ಆಭರಣ ನಾಪತ್ತೆಯಾದ ಬಗ್ಗೆ ಮನೆ ಮಾಲೀಕ ಕಾವೂರು ಪೊಲೀಸರಿಗೆ ದೂರು ನೀಡಿದ್ದರು. ಚಿನ್ನಾಭರಣ ರಾಧಾ ಮನೆಯಲ್ಲಿ ಪತ್ತೆಯಾಗಿದೆ.
ವೃದ್ಧೆಯ ಸರ ಅಪಹರಣ
ಮಂಗಳೂರು: ಅಪ್ಪರ್ ಬೆಂದೂರ್‌ಬಳಿ ಬೈಕ್‌ನಲ್ಲಿ ಬಂದ ಇಬ್ಬರು ಚೋರರು ವೃದ್ಧೆಯ ಕತ್ತಲ್ಲಿದ್ದ ಚಿನ್ನದ ಸರ ಅಪಹರಿಸಿದ್ದಾರೆ. ಭಾನುವಾರ ಸಂಜೆ ನಡೆದುಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಇಬ್ಬರು ಹಾದುಹೋಗಿದ್ದು, ಸ್ವಲ್ಪ ಹೊತ್ತಿನಲ್ಲಿ ವಾಪಸ್ ಬಂದು ಹತ್ತಿರಬರುತ್ತಿರುವಾಗ ನಿಧಾನ ಮಾಡಿ ಕುತ್ತಿಗೆಯಿಂದ ಚಿನ್ನದ ಸರ ದೋಚಿದರು ಎಂದು ವೃದ್ಧೆ ಸೆಲಿನ್ ಡಿಸೋಜ (68) ಕದ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.