ಕಾಡಾನೆ ದಾಳಿ: ಅಪಾರ ಬೆಳೆ ಹಾನಿ
ಕ.ಪ್ರ. ವಾರ್ತೆ, ಸುಬ್ರಹ್ಮಣ್ಯ, ಮಾ. 4-
ಕಾಡಾನೆಗಳ ಹಾವಳಿ ತೀವ್ರವಾಗಿರುವ ಕೊಲ್ಲಮೊಗ್ರ ಪರಿಸರದಲ್ಲಿ ಮತ್ತೆ ಕಾಡಾನೆ ಹಾವಳಿ ಕಾಣಿಸಿಕೊಂಡಿದ್ದು, ಶನಿವಾರ ಕೊಲ್ಲಮೊಗ್ರ ಗ್ರಾಮಪಂಚಾಯಿತಿ ಸದಸ್ಯ ಕಮಲಾಕ್ಷ ಮುಳುಬಾಗಿಲು ತೋಟದಲ್ಲಿ ದಾಳಿ ನಡೆಸಿ, ಅಪಾರ ಬೆಳೆಗಳನ್ನು ನಾಶಗೊಳಿಸಿದೆ.
ತೋಟದಲ್ಲಿ ಬೆಳೆದ ಸುಮಾರು 70 ಬಾಳೆ ಗಿಡ, 1 ತೆಂಗಿನ ಮರ, 5 ಅಡಕೆ ಮರಗಳನ್ನು ಎಳೆದಾಡಿ ತಿಂದು ಹಾಳು ಗೆಡವಿದೆ.
ಈ ಪರಿಸರದಲ್ಲಿ ಹಿಂದಿನ ದಿನವಷ್ಟೆ ಅರಣ್ಯ ಇಲಾಖೆಯವರು ಗ್ರಾಮಸ್ಥರೊಂದಿಗೆ ಸೇರಿ ಸಾಕಾನೆಗಳ ನೆರವು ಪಡೆದು ಕಾಡಾನೆಗಳನ್ನು ಕಾಡಿನೊಳಗೆ ಅಟ್ಟುವ ಕಾರ್ಯಾಚರಣೆ ನಡೆಸಿದ್ದರು. ಆದರೆ, ಕಾಡಾನೆಗಳ ಸುಳಿವು ಸಿಗದೆ, ಹಿಂದಿರುಗಿದ್ದರು. ಕಾಡಾನೆಗಳ ಹಾವಳಿ ಇಲ್ಲಿ ನಿರಂತರವಾಗಿ ಕೃಷಿಕರನ್ನು ಕಾಡುತ್ತಿದ್ದು, ಶಾಶ್ವತ ಪರಿಹಾರಕ್ಕಾಗಿ ಕಾಡಾನೆಗಳನ್ನು ಹಿಡಿದು ಆನೆ ಶಿಬಿರಕ್ಕೆ ಸಾಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.