ಮೋದಿ ಗೆದ್ದಲು: ಪೂಜಾರಿ ಟೀಕೆ
ಬಂಟ್ವಾಳ: ಗುಜಾರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯೇ ಒಂದು ಗೆದ್ದಲು. ಇದಕ್ಕೆ ಸಾಥ್ ನೀಡುವಂತೆ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಇನ್ನೊಂದು ಗೆದ್ದಲಾಗಿ ಹೊರಹೊಮ್ಮಿದ್ದು ಇಡೀ ವ್ಯವಸ್ಥೆಯನ್ನೇ ಕೊರೆದಿದೆ. ವಿಧಾನಸೌದಕ್ಕೆ ಗೆದ್ದಲು ಹಿಡಿಸಿ ಜನರು ಕಂಗಾಲಾಗುವಂತೆ ಮಾಡಿದ್ದಾರೆ ಎಂದು ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಹಳಿ ತಪ್ಪಿದೆ. ಪಕ್ಷ ಮೂರು ತುಂಡಾಗಿ ಹೋಗಿದ್ದು, ಇದಕ್ಕೆ ಅವರ ಅಧಿಕಾರದ ದುರಾಸೆ, ಸಂಪತ್ತು ಕ್ರೋಢೀಕರಿಸಬೇಕೆಂಬ ಹಂಬಲವೇ ಕಾರಣ ಎಂದು ಟೀಕಿಸಿದರು. ಮನಾಪ, ಪುರಸಭೆ, ನಗರ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆ ಎದ್ದಿದ್ದು, ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್‌ಪರವಾಗಿರುವ ಅಲೆಯಿಂದ ಬಿಜೆಪಿ ಕಂಗಲಾಗಿದೆ. ವಾಮಮಾರ್ಗದ ಮೂಲಕ ಗೆಲುವು ಸಾಧಿಸಲು ಯತ್ನಿಸುತ್ತಿದೆ. ಈ ಚುನಾವಣೆಯಲ್ಲಿ ಹೆಂಡ, ಹಣದ ಹೊಳೆಯೇ ಹರಿಯುವ ಸಾಧ್ಯತೆ ಇದ್ದು, ಚುನಾವಣಾ ಆಯೋಗ ಗಮನ ಹರಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ರಮಾನಾಥ ರೈ, ಪಕ್ಷ ಪ್ರಮುಖರಾದ ಬಿ.ಎಚ್. ಖಾದರ್, ಎ.ಸಿ. ಭಂಡಾರಿ, ಹರಿಕೃಷ್ಣ ಬಂಟ್ವಾಳ್, ಅಶ್ವನಿಕುಮಾರ್ ರೈ, ಅಬ್ಬಾಸ್ ಅಲಿ, ಮಾಯಿಲಪ್ಪ ಸಾಲ್ಯಾನ್, ಪದ್ಮನಾಭ ನರಿಂಗಾನ ಇದ್ದರು.
ಪಾದಯಾತ್ರೆ: ಸುದ್ದಿಗೋಷ್ಠಿ ಬಳಿಕ ಜನಾರ್ದನ ಪೂಜಾರಿ ಬಿ.ಸಿ.ರೋಡಿನ ಕೈಕಂಬದಿಂದ ಬಂಟ್ವಾಳದ ಬಡ್ಡಕಟ್ಟೆವರೆಗೆ ಪಾದಯಾತ್ರೆ ಮೂಲಕ ಮತಯಾಚನೆಗೈದರು. ಇವರೊಂದಿಗೆ ಶಾಸಕ ರಮಾನಾಥ ರೈ, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್. ಮಹಮ್ಮದ್, ಮಮತಾ ಗಟ್ಟಿ, ತಾ.ಪಂ ಸದಸ್ಯ ಪದ್ಮಶೇಖರ್ ಜೈನ್, ಭೂ ಅಭಿವೃದ್ಧಿಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಮತ್ತತರರು ಹೆಜ್ಜೆ ಹಾಕಿದರು.
--
ಇಂದಿನಿಂದ ಬ್ರಹ್ಮಕಲಶೋತ್ಸವ
ಬೆಳ್ತಂಗಡಿ: ಲಾಲದಲ್ಲಿರುವ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಬೃಂದಾವನದ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಇಂದಿನಿಂದ ಮಾ.4 ರವರೆಗೆ ವೈಭವದಿಂದ ನಡೆಯಲಿದೆ. ಈ ಸಂಬಂಧ ಸಕಲ ತಯಾರಿಗಳೂ ಪೂರ್ಣಗೊಂಡಿವೆ. ಶ್ರೀ ಮಠದ ಆವರಣದಲ್ಲಿ ಈಗಾಗಲೇ ಸುಂದರ ಬೃಂದಾವನ, ನವಗ್ರಹ ಗುಡಿ, ತೀರ್ಥಬಾವಿ, ನೈವೇದ್ಯ ಕೊಠಡಿ ಮತ್ತು ಎಲ್ಲಾ ವ್ಯವಸ್ಥೆಯಿಂದ ಕೂಡಿದ ಅನ್ನಪೂರ್ಣ ಹಾಗೂ ವಸತಿ ಗೃಹ ಸುಮಾರು ರು. 1.75 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುತ್ತದೆ.