ವಿದ್ಯಾರ್ಥಿಗಳ ಕೊರತೆ; ಹಿಂದುಳಿದ ವರ್ಗಗಳ ವಸತಿ ನಿಲಯ ಬಂದ್
- ವಜ್ರಾಕ್ಷಿ ಬಂಟ್ವಾಳ
ಮಂಗಳೂರು: ಸರ್ಕಾರ ಜನಪರ ಯೋಜನೆಗಳ ಅನುಷ್ಠಾನಕ್ಕೆ ಸಾವಿರಾರು ಖರ್ಚು ವ್ಯಯ ಮಾಡುತ್ತಿದ್ದು, ಅವುಗಳಲ್ಲಿ ಕೆಲವೊಂದು ಯೋಜನೆಗಳು ಕಾರ್ಯರೂಪಕ್ಕೆ ಬಾರದೆ ಮೂಲೆ ಗುಂಪಾಗುತ್ತಿದೆ.
ಬಜ್ಪೆ ಗ್ರಾ.ಪಂ. ಬಳಿಯಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರ್ಮಿಸಿದ್ದ 1 ರಿಂದ 4ನೇ ತರಗತಿಯ ಮಕ್ಕಳ ವಸತಿ ನಿಲಯವು ಇದಕ್ಕೆ ನಿದರ್ಶನ. ಈ ವಸತಿ ನಿಲಯಕ್ಕೆ ತಾಲೂಕು ಪಂಚಾಯ್ತಿ ಬಯೋಗ್ಯಾಸ್ ವ್ಯವಸ್ಥೆಯನ್ನು ಕಲ್ಪಿಸಿತ್ತಾದರೂ, ಕೇವಲ ಒಂದು ವರ್ಷ ಉಪಯೋಗಿಸಿದ ಬಳಿಕ ಮಕ್ಕಳ ಕೊರತೆಯಿಂದ ವಸತಿ ನಿಲಯವೇ ಮುಚ್ಚಿದೆ.
ಅಲ್ಲಿನ ಪುಟ್ಟ ಮಕ್ಕಳನ್ನು ನಗರದ ವಿವಿಧ ಸರ್ಕಾರಿ ವಸತಿ ನಿಲಯಕ್ಕೆ ಮತ್ತು ಅಲ್ಲಿನ ಶಾಲೆಗಳಿಗೆ ಸೇರಿಸಿತು. ಹಿಂದುಳಿದ ಕಲ್ಯಾಣ ಇಲಾಖೆಗೆ ಸರ್ಕಾರವು ಹತ್ತನೇ ತರಗತಿ ಮೇಲ್ಪಟ್ಟ ಬಾಲಕಿಯರ ವಸತಿ ನಿಲಯವಾಗಿ ಪರಿವರ್ತಿಸುವಂತೆ ಆದೇಶ ನೀಡಿತು. ಆದರೆ ಇಲಾಖೆಯು ಆ ಕಟ್ಟಡ ಮತ್ತು ಪ್ರದೇಶ ಸೂಕ್ತವಲ್ಲವೆಂದು ಮನಗಂಡು, ನಿಲಯದ ಕಟ್ಟಡವನ್ನು ತಾಲೂಕು ಪಂಚಾಯ್ತಿಗೆ ವಶಕ್ಕೆ ನೀಡಿದೆ.
ಕಳೆದ ಒಂದು ವರ್ಷದಿಂದ ಮುಚ್ಚಿ ಹೋಗಿರುವ ವಸತಿ ನಿಲಯದ ಮಾಹಿತಿ ಜಿಲ್ಲಾ ಪಂಚಾಯ್ತಿಗೆ ಇಲ್ಲ. ಕಾರ್ಯರೂಪಕ್ಕೆ ಬಂದ ಬಯೋಗ್ಯಾಸ್ ಯೋಜನೆ ಈಗ ಕಾರ್ಯನಿರ್ವಹಣೆ ಇಲ್ಲದೇ ಹಾಗೇ ಇದೆ. ಈ ಬಗ್ಗೆ ಮಾಹಿತಿ ಪಡೆಯದೆ ಇರುವುದು ದುರಂತವೇ ಸರಿ.
ಕಸಕಡ್ಡಿ ತ್ಯಾಜ್ಯದಿಂದ ಬಯೋಗ್ಯಾಸ್ : ಬಜ್ಪೆಯ ಸರ್ಕಾರಿ ಹಿಂದುಳಿದ ವರ್ಗಗಳ ವಸತಿ ನಿಲಯಕ್ಕೆ ಕಳೆದ ವರ್ಷ ಬಯೋಗ್ಯಾಸ್ ನಿರ್ಮಿಸಿತ್ತು. ಇದರಿಂದ ಬಜ್ಪೆ ಪ್ರದೇಶದ ಕಸಕಡ್ಡಿ, ತ್ಯಾಜ್ಯಗಳನ್ನು ನಿಯಂತ್ರಿಸಲು ಸಹಕಾರಿ ಎಂಬ ಉದ್ದೇಶವು ಇತ್ತು.
ಆಯುಷ್ ಆಸ್ಪತ್ರೆ ನಿರ್ಮಾಣ: ಮುಚ್ಚಿದ ವಸತಿ ನಿಲಯದಲ್ಲಿ ತಾಲೂಕು ಪಂಚಾಯ್ತಿ ಆಯುಷ್ ಆಯುರ್ವೇದಿಕ್ ಆಸತ್ರೆಯನ್ನು ನಿರ್ಮಿಸಲು ಚಿಂತನೆ ನಡೆಸುತ್ತಿದೆ. ಆದರೆ ವಸತಿ ನಿಲಯದ 50 ಸೆನ್ಸ್ ಸರ್ಕಾರಿ ಜಾಗವು ಗ್ರಾಮ ಮತ್ತು ತಾಲೂಕು ಪಂಚಾಯ್ತಿನ ವ್ಯಾಪ್ತಿಯಲ್ಲಿ ಇದೆಯೇ ಇಲ್ಲವೇ ಎಂಬ ಗೊಂದಲವಿದೆ ಎನ್ನುತ್ತಾರೆ ಪಾಲಿಕೆ ಸದಸ್ಯ ರಿತೇಶ್ ಶೆಟ್ಟಿ.
ಈ ವಸತಿ ನಿಲಯವು ಇದಕ್ಕಿಂತ ಮೊದಲು ತಾಲೂಕು ಅಭಿವೃದ್ಧಿ ಮಂಡಳಿ ಪ್ರವಾಸಿ ಮಂದಿರವಾಗಿತ್ತು. ಉಪಯೋಗ ಕಡಿಮೆಯಾದ ಹಿನ್ನಲೆಯಲ್ಲಿ ತಾಲೂಕು ಪಂಚಾಯ್ತಿ ಆಶ್ರಮ ಶಾಲೆ ನಿರ್ಮಿಸಲು ಅನುಮತಿ ನೀಡಿತ್ತು. ಆದರೆ ಆಶ್ರಮ ಶಾಲೆಗೆ ಮಕ್ಕಳ ಸಂಖ್ಯೆ ಕಡಿಮೆಯಾದ ಪರಿಣಾಮ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ 25 ಮಕ್ಕಳ ಬಾಲಕಿಯರ ವಸತಿ ನಿಲಯವನ್ನು ನಿರ್ಮಿಸಿತು. ಇದನ್ನು ಸಂಸ್ಥೆ ತಾಲೂಕು ಪಂಚಾಯ್ತಿನಿಂದ ಬಾಡಿಗೆ ಪಡೆದು ಮುಂದುವರಿಸಿತ್ತು. ಮಕ್ಕಳ ಸಂಖ್ಯೆ ಕಡಿಮೆಯಾದ ಕಾರಣ ಕಳೆದ ಮಾರ್ಚ್ನಲ್ಲಿ ವಸತಿ ನಿಲಯವನ್ನು ತೆರವುಗೊಳಿಸಿ ತಾಲೂಕು ಪಂಚಾಯ್ತಿಯ ವಶಕ್ಕೆ ಒಪ್ಪಿಸಿದೆ.
ಇದರ ಬಳಿಯಲ್ಲಿಯೇ ಇತ್ತೀಚೆಗಷ್ಟೇ ಬಜ್ಪೆ ಪ್ರದೇಶದ ಸ್ತ್ರೀ ಶಕ್ತಿ, ಸ್ವಸಹಾಯ ಗುಂಪುಗಳು ತಯಾರಿಸಿದ ವಸ್ತುಗಳ ಮಾರಾಟಕ್ಕಾಗಿ 3 ಕೋಣೆಗಳನ್ನು ಹೊಂದಿದ ಸ್ವರೋಜಗಾರಿಗಳ ತರಬೇತಿ, ಉತ್ಪಾದನೆ ಮತ್ತು ಮಾರಾಟ ಮಳಿಗೆ ಕಟ್ಟಡವನ್ನು ನಿರ್ಮಿಸಿದೆ. ಇದಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆದರೆ ಯಾವುದೇ ಸಂಘಗಳು ಆಸಕ್ತಿ ತೋರದ ಪರಿಣಾಮ ಆ ಕಟ್ಟಡ ಕೂಡ ಪಾಳು ಬಿದ್ದಿದೆ. ಒಟ್ಟಾರೆ ಸರ್ಕಾರದ ಯೋಜನೆಗಳು ಅಧಿಕಾರಿಗಳ ದುಡುಕಿನಿಂದ ಮೂಲೆಗುಂಪಾಗುತ್ತಿರುವುದಲ್ಲದೆ, ಹಣವು ವ್ಯಯವಾಗುತ್ತಿದೆ.
ನಗರದ ಉಳ್ಳಾಲದ ವಸತಿ ನಿಲಯದಲ್ಲಿ ಮಕ್ಕಳ ಕೊರತೆ ಎದುರಾಗಿದೆ. ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವ ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ವಸತಿ ನಿಲಯಗಳನ್ನು ಹತ್ತನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳ ವಸತಿ ನಿಲಯವಾಗಿ ಪರಿವರ್ತಿಸಲಾಗುತ್ತಿದೆ. ವಸತಿ ನಿಲಯ ನಿರ್ಮಿಸಲು ನಗರದಲ್ಲಿ ಕಟ್ಟಡದ ಪರಿಶೀಲನೆ ನಡೆಯುತ್ತಿದ್ದು, ಬಾಡಿಗೆ ಹೆಚ್ಚು ಕೇಳುತ್ತಿದ್ದು, ಇಲಾಖೆ ನಿರಾಕರಿಸುತ್ತಿದೆ. ದೇರಳಕಟ್ಟೆಯಲ್ಲಿ ಕಟ್ಟಡವನ್ನು ಗುರುತಿಸಲಾಗಿದ್ದು, ಪರಿಶೀಲನೆಯಲ್ಲಿದೆ ಎನ್ನುತ್ತದೆ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ. ಜಿ.ಪಂ. ಅಧಿಕಾರಿಯೊಬ್ಬರ ಪ್ರಕಾರ, 'ಬಯೋಗ್ಯಾಸ್ ವ್ಯವಸ್ಥೆ ಕಲ್ಪಿಸಿ ಯಶಸ್ವಿಯಾಗಿತ್ತು. ವಸತಿ ನಿಲಯ ಮುಚ್ಚಿರುವ ಬಗ್ಗೆ ಮಾಹಿತಿ ಇಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು' ಎಂದು ತಿಳಿಸಿದರು.