ಅಪಘಾತ: ಬೈಕ್ ಸವಾರ ಬಲಿ, ವಾಹನ ಪರಾರಿ
ಮಂಗಳೂರು: ಯೆಯ್ಯಾಡಿ ಶರ್ಬತ್ಕಟ್ಟೆ ಬಳಿ ಬೊಲೆರೊ ವಾಹನಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದಾರೆ. ಸೋಮವಾರ ರಾತ್ರಿ 11 ಗಂಟೆ ವೇಳೆಗೆ ಅಪಘಾತ ಸಂಭವಿಸಿದೆ. ದಂಡಕೇರಿ ನಿವಾಸಿ ರಿತೇಶ್ (30) ಮೃತಪಟ್ಟವರು. ಚಾಲಕ ಅಪಘಾತ ನಡೆಸಿ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಅಪಘಾತ ನಡೆದ ಸ್ಥಳದಲ್ಲಿಯೇ ಯುವಕ ಮೃತಪಟ್ಟಿದ್ದಾನೆ. ಪೊಲೀಸರು ಪರಾರಿಯಾದ ವಾಹನ ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಇದೇ ಪರಿಸರದಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದರು.
ಮತಾಂತರಕ್ಕೆ ಯತ್ನ ಪ್ರಕರಣ:
ಆರೋಪಿಗಳು ಪೊಲೀಸ್ ಕಸ್ಟಡಿಗೆ
ಪುತ್ತೂರು: ತಾಲೂಕಿನ ಪಾಲ್ತಾಡಿ ಗ್ರಾಮದ ಅಂಕತ್ತಡ್ಕದ ಪರಿಶಿಷ್ಟ ಪಂಗಡದ ಯುವತಿಯ ಅಪಹರಿಸಿ ಮತಾಂತರ ಮಾಡಲು ಯತ್ನಿಸಿದ ಆರೋಪದಲ್ಲಿ ಬಂಧಿತ ನೋಟರಿ ವಕೀಲ ಸಹಿತ ಮೂವರನ್ನು ಪುತ್ತೂರು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಸಾಲ್ಮರ ನಿವಾಸಿ ಸಾಲ್ಮರ ನೂರುದ್ದೀನ್, ಮುಸ್ಲಿಂ ಸಂಘಟನೆ ಮುಖಂಡ, ಬೆಟ್ಟಂಪಾಡಿ ಗ್ರಾಮದ ಅಲ್ತಫ್ ಮತ್ತು ಪಾಲ್ತಾಡು ಗ್ರಾಮದ ಅಂಕತ್ತಡ್ಕ ನಿವಾಸಿ ಕೋಳಿ ವ್ಯಾಪಾರಿ ಅಬ್ದುಲ್ ಅಜೀದ್ ಆರೋಪಿಗಳು. ಇವರನ್ನು ಸಂಪ್ಯ ಪೊಲೀಸರು ಶನಿವಾರ ಬಂಧಿಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಪೊಲೀಸರ ಮನವಿ ಮೇರೆಗೆ ಮಂಗಳವಾರ, ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ರೈಲು ಡಿಕ್ಕಿ; ಅಪರಿಚಿತ ಸಾವು
ಕಾಪು: ರೈಲು ಡಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿ ಮೃತಪಟ್ಟ ಘಟನೆ ಏಣಗುಡ್ಡೆ ಗ್ರಾಮದ ಚೊಕ್ಕಾಡಿ ರೇಲ್ವೆ ಸೇತುವೆ ಬಳಿ ನಡೆದಿದೆ. ಭಾನುವಾರ ಸಂಜೆ ಸುಮಾರು 4 ಗಂಟೆ ಸಮಯಕ್ಕೆ ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ಗಂಡಸು ಏಣಗುಡ್ಡೆ ಗ್ರಾಮದ ಚೊಕ್ಕಾಡಿ ರೇಲ್ವೆ ಸೇತುವೆ ಬಳಿ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಂದರ್ಭ ಮತ್ಸ್ಯಗಂಧ ರೈಲು ಡಿಕ್ಕಿ ಹೊಡೆದು ಮೃತಪಟ್ಟಿರಬಹುದು ಎಂದು ಪ್ರವೀಣ್ ಎಂಬವರು ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ
ಉಡುಪಿ: ಇಲ್ಲಿನ ರೋಯಲ್ ಗಾರ್ಡನ್ ವರ್ತೆ ಪಂಜುರ್ಲಿ ದೈವಸ್ಥಾನದ ಬಳಿ ಸುಮಾರು 45 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತಶರೀರ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದ್ದು, ಶರೀರದಲ್ಲಿ ಕೆಂಪು ಬಣ್ಣದ ಅಡ್ಡ ಗೆರೆಯ ನೀಲಿ ಟೀ-ಶರ್ಟ್, ಕಂದು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಸಾರ್ವಜನಿಕರಲ್ಲಿ ವಿಚಾರಿಸಿದಲ್ಲಿ ಗುರುತು, ಹೆಸರು ವಿಳಾಸ ತಿಳಿದುಬಂದಿಲ್ಲ. ಈ ಬಗ್ಗೆ ಸೀತಾರಾಮ ಆಚಾರ್ಯ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.