ಉಳ್ಳಾಲ; 'ಕೈ'ಗೆ ಬಂಡಾಯ ಬಿಸಿ, ಎಸ್ಡಿಪಿಐ, ಜೆಡಿಎಸ್ ಸ್ಪರ್ಧಿಗಳ ಪ್ರಬಲ ಪ್ರತಿಸ್ಪರ್ಧೆ
ಮಂಗಳೂರು: ಗುರುವಾರ ನಡೆಯುವ ಚುನಾವಣೆಗೆ 27 ವಾರ್ಡ್ ಪಕಿ ಎಲ್ಲ ವಾರ್ಡ್ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿ 18 ವಾರ್ಡ್ಗೆ ಸೀಮಿತಗೊಳಿಸಿದ್ದು, ಉಳಿದ ಕಡೆಗಳಲ್ಲಿ ಪಕ್ಷೇತರ, ಪ್ರತಿಪಕ್ಷಗಳ ಬಂಡಾಯಕೋರರನ್ನು ಬೆಂಬಲಿಸಿದೆ. ಕಾಂಗ್ರೆಸ್ ಭಿನ್ನಮತದ ಪ್ರಯೋಜನ ಪಡೆದು ಹೇಗಾದರೂ ಅಧಿಕಾರ ಗದ್ದುಗೆಗೆ ಪಡೆಯುವ ಲೆಕ್ಕಾಚಾರ ಬಿಜೆಪಿಯದು. ಇಲ್ಲಿ ಜೆಡಿಎಸ್ 19 ಸ್ಥಾನಗಳಲ್ಲಿದ್ದು, ಸಿಪಿಐಎಂ7, ಸ್ವತಂತ್ರರು 9, ಎಸ್ಡಿಪಿಐ 9, ಕೆಜೆಪಿ 4 ಸೇರಿ ಒಟ್ಟು 93 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.
ಬಂಡಾಯ ಬಿಸಿ: ನಗರ ಪಂಚಾಯ್ತಿ ಅಧ್ಯಕ್ಷರಾಗಿದ್ದ ಫಾರೂಕ್ ಯು.ಎಚ್ ಮತ್ತು ದಿನಕರ ಉಳ್ಳಾಲ್ಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದೆ. ಹೀಗಾಗಿ ಇವರಿಬ್ಬರು ಬಂಡಾಯವಾಗಿ ಸ್ಪರ್ಧಿಸುತ್ತಿದ್ದಾರೆ. ಇದನ್ನು ಹೇಗೆ ಕಾಂಗ್ರೆಸ್ ತಾಳಿಕೊಳ್ಳುತ್ತದೆ ಎಂಬುದನ್ನು ನೋಡಬೇಕಾಗಿದೆ. 2ನೇ ಅವಧಿಯಲ್ಲಿ ಪುರಸಭಾ ಅಧ್ಯಕ್ಷರಾಗಿದ್ದ ಬಾಸಿಲ್ ಡಿಸೋಜ ಒಪ್ಪಂದ ಪ್ರಕಾರ ಒಂದುಕಾಲು ವರ್ಷದಲ್ಲಿ ಅಧಿಕಾರ ಬಿಟ್ಟುಕೊಡದೆ ಪೂರ್ತಿ ಎರಡೂವರೆ ವರ್ಷ ಇದ್ದರು. ಹಾಗಾಗಿ ಅವರ ಬದಲು ವಿನ್ಸೆಂಟ್ಗೆ ಟಿಕೆಟ್ ನೀಡಲಾಗಿತ್ತು. ಆದರೆ ಆ ವಾರ್ಡ್ನ ಮತದಾರರ ಪಟ್ಟಿಯಲ್ಲಿ ಅವರ ಹೆಸರೇ ಇರಲಿಲ್ಲ. ಹಾಗಾಗಿ ಮತ್ತೆ ಅನಾಯಾಸವಾಗಿ ಬಾಸಿಲ್ ಡಿಸೋಜಗೆ ಪಕ್ಷ ಟಿಕೆಟ್ ನೀಡಬೇಕಾಯಿತು.