ಖಾತ್ರಿಗೆ ತಾಂತ್ರಿಕ ಅಧಿಕಾರಿಗಳೇ ಇಲ್ಲ!
ಕ.ಪ್ರ.ವಾರ್ತೆ, ಮಂಗಳೂರು, ಮಾ.5-
'ಖಾಲಿ ಕೈಗಳಿಗೆ ಉದ್ಯೋಗ' ಎಂಬ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉದ್ಯೋಗ ಖಾತ್ರಿ ಯೋಜನೆಗೆ ರಾಜ್ಯದಿಂದಲೇ ಸರಿಯಾದ ಸಹಕಾರ ಸಿಗುತ್ತಿಲ್ಲ. ಈ ಯೋಜನೆಯಲ್ಲಿ ಉದ್ಯೋಗ ಮಾಡಿರುವುದನ್ನು ಖಾತರಿ ಪಡಿಸಬೇಕಾದ ತಾಂತ್ರಿಕ ಅಧಿಕಾರಿಗಳ ನೇಮಕಾತಿಯೇ ಪೂರ್ತಿಯಾಗಿಲ್ಲ. ಬೇರೆ ಇಲಾಖೆಗಳಲ್ಲಿರುವ ತಾಂತ್ರಿಕ ಅಧಿಕಾರಿಗಳು ಕಾರ್ಯ ಒತ್ತಡದಿಂದ ಇತ್ತ ತಲೆಹಾಕುತ್ತಿಲ್ಲ. ತಾಂತ್ರಿಕ ಅಧಿಕಾರಿಯ ಅನುಮತಿ ವಿನಾ ಕೆಲಸದ ಬಿಲ್ ಪಾವತಿಯಾಗುತ್ತಿಲ್ಲ. ಇದರಿಂದ ರಾಜ್ಯದ ಬಹುತೇಕ ಕಡೆಗಳಲ್ಲಿ ಮಾರ್ಚ್ ಬಂದರೂ ಖಾತ್ರಿ ಕೆಲಸ ಗುರಿ ತಲುಪುತ್ತಿಲ್ಲ.
ಖಾತ್ರಿ ಯೋಜನೆಗೆ ಪ್ರತ್ಯೇಕವಾಗಿ ಹೊರಗುತ್ತಿಗೆಯಲ್ಲಿ ತಾಂತ್ರಿಕ ಅಧಿಕಾರಿಗಳನ್ನು ನೇಮಿಸುವಂತೆ ಕೇಂದ್ರ ಸರ್ಕಾರ 2009ರಲ್ಲೇ ಆದೇಶಿಸಿತ್ತು. ಆಗ ಉದ್ಯೋಗ ಬಯಸುವ ಕೈಗಳ ಪ್ರಮಾಣ ಕಡಿಮೆ ಇತ್ತು. ಹಾಗಾಗಿ ತಾಂತ್ರಿಕ ಅನುಮೋದನೆ ಕೆಲಸವನ್ನು ತೋಟಗಾರಿಕೆ, ಜಲಾನಯನ, ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಮಾಡುತ್ತಿದ್ದರು. ಕ್ರಮೇಣ ಖಾತ್ರಿ ಕೆಲಸ ವಿಸ್ತಾರವಾದರೂ ಕೆಲಸ ಖಾತ್ರಿ ಪಡಿಸುವುದನ್ನು ಈ ಎಂಜಿನಿಯರ್ಗಳೇ ಮಾಡುತ್ತಿದ್ದರು. ಈಗ ಅವರಿಗೂ ಇಲಾಖಾ ಕೆಲಸದ ಒತ್ತಡ ಹೆಚ್ಚಾಗಿದ್ದರಿಂದ ಖಾತ್ರಿಯತ್ತ ಗಮನಿಸಲು ಆಗುತ್ತಿಲ್ಲ. ಇದರಿಂದ ಖಾತ್ರಿ ಕೆಲಸಕ್ಕೆ ತಾಂತ್ರಿಕ ಅಧಿಕಾರಿಗಳ ಅನುಮೋದನೆ ಸಿಗದೆ ಕೂಲಿ ಮೊತ್ತ ಪಾವತಿಸಲು ಸಾಧ್ಯವಾಗುತ್ತಿಲ್ಲ. ಇದು ಖಾತ್ರಿ ವಿಳಂಬಕ್ಕೆ ಕಾರಣವಾಗಿದೆ.
ನಿರ್ದೇಶಕರ ಆತಂಕ: ಖಾತ್ರಿ ಯೋಜನೆಯ ರಾಜ್ಯ ನಿರ್ದೇಶಕರಾಗಿದ್ದ ಪ್ರಸನ್ನ ಕುಮಾರ್ ಎಲ್ಲ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ (14-7-2010 ಗ್ರಾಅಪ 70 ಉಖಾಯೋ) ಬರೆದಿದ್ದರು. ಆ ಪತ್ರದಲ್ಲಿ, ಕೇಂದ್ರ ಸರ್ಕಾರ ಹೊರಡಿಸಿದ ಆದೇಶದಂತೆ ಎಲ್ಲಿಯೂ ಹೊರಗುತ್ತಿಗೆಯಲ್ಲಿ ತಾಂತ್ರಿಕ ಅಧಿಕಾರಿಗಳ ನೇಮಕವಾಗಿಲ್ಲ. ಇದರಿಂದ ಖಾತ್ರಿ ಕಾಮಗಾರಿಯ ಅಳತೆ, ಕೂಲಿ ಪಾವತಿ ವಿಳಂಬವಾಗುತ್ತಿದೆ. ಕಳಪೆ ಕಾಮಗಾರಿಯಲ್ಲದೆ ಪ್ರಗತಿಯೂ ಕುಂಠಿತವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಪ್ರತಿ 6 ಸಾವಿರ ಕುಟುಂಬಗಳಿರುವಲ್ಲಿ ಇಬ್ಬರು ತಾಂತ್ರಿಕ ಅಧಿಕಾರಿಯನ್ನು ನೇಮಿಸಬೇಕು. ಕೊನೆಗೂ ಬೆಂಗಳೂರಿನಲ್ಲಿ ನಡೆದ ನರೇಗಾ ಅಧಿಕಾರಿಗಳ ಸಭೆಯಲ್ಲಿ ಚರ್ಚಿಶಿ, ಜಿಪಂನ ಶೇ.6 ಆಡಳಿತ ವೆಚ್ಚದಲ್ಲಿ ಹೊರಗುತ್ತಿಗೆಯಲ್ಲಿ ತಾಂತ್ರಿಕ ಅಧಿಕಾರಿಗಳ ನೇಮಕಾತಿಗೆ ಒಪ್ಪಿಗೆ ಸೂಚಿಸಿತು.
ಪೂರ್ತಿಯಾಗದ ನೇಮಕಾತಿ: ಅದರಂತೆ ಆಯಾ ಜಿಪಂನಲ್ಲಿ ನೇಮಕಾತಿ ಪ್ರಕ್ರಿಯೆ ಶುರುವಾದಾಗ, ನೇರವಾಗಿ ಸರ್ಕಾರವೇ ತಾನೇ ನೇಮಕಾತಿ ನಡೆಸುವುದಾಗಿ ಹೇಳಿತ್ತು. ಈಗ ಬೀದರ್, ಉತ್ತರ ಕನ್ನಡ, ಬಳ್ಳಾರಿ ಹೊರತುಪಡಿಸಿ ಬೇರೆ ಎಲ್ಲ ಜಿಲ್ಲೆಗಳಲ್ಲಿ ನೇಮಕಾತಿ ಪೂರಗೊಳಿಸಿರುವುದಾಗಿ ಖಾತ್ರಿ ಅಧಿಕಾರಿಗಳು ಹೇಳುತ್ತಿದ್ದರೂ, ನೇಮಕಾತಿ ಪೂರ್ತಿಯಾಗಿಲ್ಲ.
ಆಯಾ ಜಿಪಂಗಳು ಮಾಡಿದ ನೇಮಕಾತಿಯನ್ನು ಹಾಗೆಯೇ ಉಳಿಸಿಕೊಳ್ಳುತ್ತೇವೆ. ಹೊಸದಾಗಿ ನೇಮಕಾತಿ ಮಾಡಿದವರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲಿದ್ದಾರೆ. ಇದರಿಂದ ನರೇಗ ನಿರೀಕ್ಷಿತ ರೀತಿಯಲ್ಲಿ ಗುರಿ ಮುಟ್ಟುವ ಇರಾದೆ ಇದೆ.
-ಚಂದ್ರಶೇಖರ ಮಸಗುಪಿ
ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಮಂದಿ ಹೊರಗುತ್ತಿಗೆ ಎಂಜಿನಿಯರ್ರ ನೇಮಕ ಆಗಿದೆ ಎಂಬ ಮಾಹಿತಿ ಇಲ್ಲ. ಈವರೆಗೆ ಯಾರದೇ ನೇಮಕಾತಿಯೂ ಆಗಿಲ್ಲ. ಖಾತ್ರಿ ಅನುಷ್ಠಾನ ಹಿನ್ನಡೆಗೆ ಇದೂ ಕಾರಣ. ಇದರಿಂದ ಪ್ರಗತಿಗೆ ಭಾರಿ ಹಿನ್ನಡೆಯಾಗಿದೆ.
-ಸೀತಮ್ಮ
ದ.ಕ. ಜಿಲ್ಲಾ ಪಂಚಾಯ್ತಿ ಯೋಜನಾಧಿಕಾರಿ
ಸುಳ್ಯ ತಾಲೂಕಲ್ಲಿ 27 ಗ್ರಾಪಂಗೆ ಮೂರೇ ಮಂದಿ ಎಂಜಿನಿಯರ್ ಇದ್ದಾರೆ. ಅವರೆಲ್ಲ ಜಿಪಂ ಎಂಜಿನಿಯರಿಂಗ್ ವಿಭಾಗದವರು. ಅವರಿಗೆ ಬೇರೆ ಬೇರೆ ಅನುದಾನದ ಕಾಮಗಾರಿ ವೀಕ್ಷಣೆ ಹೊಣೆ ಇರುವಾಗ ಖಾತ್ರಿ ಯೋಜನೆ ಕಾಮಗಾರಿಯನ್ನೂ ವೀಕ್ಷಿಸಿ ಅನುಮೋದಿಸಬೇಕು.
- ರಾಜೇಶ್ ಭಟ್
ಐವರ್ನಾಡು ಗ್ರಾಮ ಪಂಚಾಯ್ತಿ ಸದಸ್ಯ
- ಆತ್ಮಭೂಷಣ್