ಗದಗದ ಪ್ರಣಯ ಜೋಡಿಗೆ ಮಂಗಳೂರಲ್ಲಿ ಕಂಕಣ
ಮಂಗಳೂರು: ಪ್ರೀತಿ ಮಾಡಿದ ಹುಡುಗಿ ಮದುವೆಗೆ ಹೆತ್ತವರು ನಿರಾಕರಿಸಿದಾಗ ಊರನ್ನೇ ಬಿಟ್ಟು ಮಂಗಳೂರಿಗೆ ಬಂದ ಯುವಕನಿಗೆ ಜನಶಕ್ತಿ ಸೇವಾ ಟ್ರಸ್ಟ್ ಮತ್ತು ಲಯನ್ಸ್ ಕ್ಲಬ್ ಮುಂದೆ ನಿಂತು ಮದುವೆ ಮಾಡಿಸಿದೆ.
ಗದಗದ ರವಿ ಬುದ್ದಿಹಾಳ ಮತ್ತು ಪಕ್ಕದ ಹಳ್ಳಿಯ ರತ್ನಾ ನಡುವಿನ ಪರಿಚಯ ಪ್ರೇಮವಾಗಿ ಬೆಳೆದಿತ್ತು. ರತ್ನ ಮಂಗಳೂರಲ್ಲಿ ಬ್ಯುಟೀಶಿಯನ್ ಕೆಲಸ ಮಾಡಿಕೊಂಡು ಹೆತ್ತವರ ಜತೆ ವಾಸವಾಗಿದ್ದಾರೆ.
ರತ್ನ ತನ್ನೂರಿಗೆ ಹೋಗುತ್ತಿದ್ದ ವೇಳೆ ರವಿ ಜತೆ ಪ್ರೀತಿ ಹುಟ್ಟಿತ್ತು. 6 ತಿಂಗಳ ಹಿಂದೆ ರವಿ ತನ್ನ ಹೆತ್ತವರ ಜತೆ ರತ್ನಾಳನ್ನು ಮದುವೆಯಾಗುವುದಾಗಿ ಹೇಳಿದ್ದ. ಆದರೆ ರವಿ ಹೆತ್ತವರು ಮದುವೆಗೆ ನಿರಾಕರಿಸಿದ್ದರು. ಅವಳಿಗಿಂತ ಒಳ್ಳೆಯ ಸ್ಥಿತಿವಂತ ವಧುವನ್ನು ಮದುವೆ ಮಾಡಿಸುವುದಾಗಿ ಹೇಳಿದರು. ಆದರೆ ರವಿ ಮನಸ್ಸು ಇದಕ್ಕೆ ಒಪ್ಪಿರಲಿಲ್ಲ.
ರತ್ನಾಳನ್ನು ಮದುವೆಯಾಗಲೇಬೇಕು ಎಂಬ ಆಸೆಯಿಂದ ಮಂಗಳೂರಿಗೆ ಬಂದ ರವಿ ಇಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕೂ ಸೇರಿಕೊಂಡರು. ಆದರೆ ಹೆತ್ತವರನ್ನು ಧಿಕ್ಕರಿಸಿ ಮದುವೆ ಆಗುವುದು ಹೇಗೆ ಎಂಬ ಚಿಂತೆ ಕಾಡುತ್ತಿತ್ತು. ಆಗ ನೆರವಿಗೆ ಬಂದದ್ದೇ ಜನಸೇವಾಶಕ್ತಿ ಟ್ರಸ್ಟ್, ಮಂಗಳಾದೇವಿ ಲಯನ್ಸ್ ಮತ್ತು ಲಯನೆಸ್ ಕ್ಲಬ್.
ನಗರದ ಕಾಶಿ ಸದನದಲ್ಲಿ ಸೋಮವಾರ ಸರಳ ವಿವಾಹ ನಡೆಯಿತು. ಭೂರಿ ಭೋಜನ ಇರಲಿಲ್ಲ ನಿಜ. ಆದರೆ ಅಲ್ಲಿಗೆ ಬಂದವರಲ್ಲಿ ಸಂತೃಪ್ತಿಯ ಕಳೆ ಇತ್ತು. ಪ್ರೇಮಿಗಳನ್ನು ಒಗ್ಗೂಡಿಸಿ ಮದುವೆ ಮಾಡಿಸಿದ ಖುಷಿ ಇತ್ತು. ಕುಪ್ಪಕಲ್ಲು ನರಸಿಂಹ ಶೆಟ್ಟಿ, ಲಯನೆಸ್ ಕ್ಲಬ್ ಅಧ್ಯಕ್ಷೆ ಸತ್ಯಲತ ಚಂದ್ರಹಾಸ್, ಜನಸೇವಾ ಟ್ರಸ್ಟ್ ಅಧ್ಯಕ್ಷ ಎಂ.ದೇವದಾಸ್, ಉಪಾಧ್ಯಕ್ಷ ಬಿ.ವಿಷ್ಣುಮೂರ್ತಿ ಹಾಗೂ ಲಯನ್ಸ್ ಸದಸ್ಯರು ಮದುವೆಗೆ ಸಾಕ್ಷಿಗಳಾದರು. 'ಯುವಕನಿಗೆ ಈ ಹಿಂದೆ ಮದುವೆಯಾಗಿದೆಯೋ ಎಂಬ ಬಗ್ಗೆ ವಿಚಾರಣೆ ನಡೆಸಿದ್ದೇವೆ. ಆತನ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ಇಬ್ಬರು ಪ್ರಾಪ್ತ ವಯಸ್ಕರು ಎಂದು ಕಂಡು ಬಂದ ಬಳಿಕವೇ ಅವರಿಗೆ ಮದುವೆ ಮಾಡಿಸಿದ್ದೇವೆ' ಎಂದು ಜನಸೇವಾಶಕ್ತಿ ಟ್ರಸ್ಟ್ ಅಧ್ಯಕ್ಷ ಎಂ.ದೇವದಾಸ್ ಕನ್ನಡಪ್ರಭಕ್ಕೆ ತಿಳಿಸಿದರು.