ಚುನಾವಣೆಗೆ ಪೊಲೀಸ್ ಕಣ್ಗಾವಲು
ಮಂಗಳೂರು: ಸ್ಥಳೀಯ ಸಂಸ್ಥೆಗಳಿಗೆ ಮಾ.7ರಪಂದು ಚುನಾವಣೆ ನಡೆಯುವ ಹಿನ್ನಲೆಯಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮ ಪರಿಶೀಲಿಸಲು ಚುನಾವಣಾ ವೀಕ್ಷಕ ಎ.ಕೆ.ಮೊನ್ನಪ್ಪರ ಅಧ್ಯಕ್ಷತೆಯಲ್ಲಿ ಮಂಗಳವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಪೊಲೀಸ್ ಮತ್ತು ಸೆಕ್ಟರ್ ಅಧಿಕಾರಿಗಳ ವಿಶೇಷ ಪೂರ್ವಭಾವಿ ಸಭೆ ನಡೆಯಿತು.
ಪೊಲೀಸ್ ಗುಪ್ತಚರ ವಿಭಾಗ ಜಾಗೃತವಾಗಿರಬೇಕು. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ, ನಿರ್ಭೀತ ವಾತಾವರಣ ನಿರ್ಮಾಣಕ್ಕೆ ಒತ್ತು ನೀಡಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದ ಚುನಾವಣಾ ವೀಕ್ಷಕರು, ಗೊಂದಲ ರಹಿತ ಚುನಾವಣೆಗೆ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿಗಳ ನಡುವೆ ಸಮನ್ವಯತೆ, ಸಂವಹನ ಸ್ಪಷ್ಟವಾಗಿರಬೇಕು ಎಂದರು.
ಚುನಾವಣಾ ಕರ್ತವ್ಯ ನಿರ್ಲಕ್ಷಿಸಿದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಎಲ್ಲ ಸೆಕ್ಟರ್‌ನ ಪೊಲೀಸ್ ಅಧಿಕಾರಿಗಳೊಂದಿಗೆ ಅವರ ವ್ಯಾಪ್ತಿಯಲ್ಲಿರುವ ಕಾನೂನು, ಸುವ್ಯವಸ್ಥಎ ಪಾಲನೆ ಸಂಬಂಧ ಮಾಹಿತಿಯನ್ನು ಪಡೆದುಕೊಂಡು ವಿಶೇಷ ನಿಗಾ ಇರಿಸಲು ಸೂಚಿಸಿದರು.
ಎಲ್ಲ ಮತದಾನ ಕೇಂದ್ರಗಳ ಸುರಕ್ಷತೆ ಹೊಣೆ ಖಚಿತಪಡಿಸಲು ನಿರ್ದೇಶನ ನೀಡಿದ ಅವರು, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದರು. ಈ ಚುನಾವಣೆಯನ್ನು ಯಶಸ್ವಿಯಾಗಿ ಮುಗಿಸಿದರೆ, ವಿಧಾನಸಭಾ ಚುನಾವಣೆಯೂ ಸುಲಲಿತವಾಗಲಿದೆ ಎಂದರು. ಅತಿ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿರುವಲ್ಲಿ ಶಾಂತಿ ಸಮಿತಿ ರಚಿಸಿ ಸಭೆ ನಡೆಸಬೇಕು, ಜನಪ್ರತಿನಿಧಿಗಳಾದವರು ಗಲಾಟೆ ಮಾಡಿದರೆ ಆಗುವ ಪರಿಣಾಮಗಳ ಬಗ್ಗೆ ವಿವರಿಸಬೇಕು ಎಂದರು.
ಮಂಗಳವಾರ ರಾತ್ರಿಯಿಂದಲೇ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಕಾಶ್ ಇವರುಗಳು ಪೊಲೀಸ್ ಕಮಿಷನರ್ ಜತೆಯಲ್ಲಿ ಮತದಾನದ ಪೂರ್ವತಯಾರಿ ವೀಕ್ಷಣೆ ನಡೆಸಲಿದ್ದೇವೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಕಾಶ್, ಪೊಲೀಸ್ ಕಮಿಷನರ್ ಮನೀಷ್ ಕರ್ಭೀಕರ್, ಅಪರ ಜಿಲ್ಲಾಧಿಕಾರಿ ದಯಾನಂದ್, ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್, ಹಿರಿಯ ಅಧಿಕಾರಿಗಳು ಹಾಜರಿದ್ದರು.
ಮತದಾನ ಕೇಂದ್ರದಲ್ಲಿ ಮೂಲಸೌಕರ್ಯ
ಖಚಿತಪಡಿಸಿ
ಮಂಗಳೂರು: ಮತದಾನ ಕೇಂದ್ರಗಳಲ್ಲಿ ಮತದಾನಕ್ಕೆ ಪೂರಕವಾಗಿ ಹಾಗೂ ಕರ್ತವ್ಯ ನಿರತ ಸಿಬ್ಬಂದಿ ಮೂಲಸೌಕರ್ಯಗಳನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಚುನಾವಣಾ ವೀಕ್ಷಕ ಎ.ಕೆ.ಮೊನ್ನಪ್ಪ ಹೇಳಿದ್ದಾರೆ. ಕೇಂದ್ರಗಳಲ್ಲಿ ಮತದಾನಕ್ಕೆ ಅನುಕೂಲವಾದ ವ್ಯವಸ್ಥೆಯನ್ನು ಮಂಗಳವಾರ ರಾತ್ರಿಯೇ ಪೂರ್ತಿಗೊಳಿಸಬೇಕು. ಬುಧವಾರ ಮತದಾನ ಕೇಂದ್ರಗಳಿಗೆ ತಲಪಿದ ಬಳಿಕ ಕೀ ಹುಡುಕುವ ವ್ಯವಸ್ಥೆ ಇರಬಾರದು. ಮತದಾನ ಕೇಂದ್ರ ತಲಪುವ ವರೆಗೆ 7 ಸಂದೇಶಗಳು ಸೆಕ್ಟರ್ ಅಧಿಕಾರಿಗಳಿಂದ ಬರಬೇಕು. ಅದು ಇತರ ಅಧಿಕಾರಿಗಳು ನೀಡುವ ಸಂದೇಶಗಳೊಂದಿಗೆ ತಾಳೆಯಾಗಬೇಕು, ಎಚ್ಚರಿಕೆಯಿಂದ ಇರಬೇಕು ಎಂದ ಎ.ಕೆ.ಮೊನ್ನಪ್ಪ, ಕೆಲವು ಕೇಂದ್ರಗಳಿಗೆ ತೆರಳಿ ಆಗಬೇಕಿರುವ ಪೂರ್ವಸಿದ್ಧತೆಗಳ ಬಗ್ಗೆ ಸೂಚನೆ ನೀಡಿದರು.