ಜಾಮೀನು ವಿಚಾರಣೆ ಮುಂದಕ್ಕೆ
ಕನ್ನಡಪ್ರಭ ವಾರ್ತೆ ಬೆಂಗಳೂರು ಮಾ.5
ಆರ್ಟಿಐ ಕಾರ್ಯಕರ್ತ ವಾಸುದೇವ್ ಅಡಿಗ ಅವರ ಕೊಲೆ ಪ್ರಕರಣದ ಆರೋಪಿ ಸುಬ್ರಹ್ಮಣ್ಯ ಉಡುಪ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಹಾಗೂ ಉಡುಪ ಅವರ ಮಧ್ಯೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಗಳ ವಿವರ ನೀಡುವಂತೆ ತನಿಖಾಧಿಕಾರಿಗಳಿಗೆ ವಿಭಾಗೀಯ ಪೀಠ ಸೂಚಿಸಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿ ಅಡಿಗ ಅವರ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ಬೆಂಗಳೂರಿನ ವಿಲ್ಸನ್ ಗಾರ್ಡನ್ ನಿವಾಸಿ ಉಡುಪ ಅವರನ್ನು ಕಳೆದ ಜ.18ರಂದು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಉಡುಪ ಅವರ ಕೈವಾಡವಿದೆ ಎಂಬ ಬಗ್ಗೆ ತನಿಖಾಧಿಕಾರಿಗಳ ಬಳಿ ಯಾವುದೇ ದಾಖಲೆಗಳಿಲ್ಲ. ದೂರವಾಣಿ ಸಂಭಾಷಣೆ ಬಗ್ಗೆ ಹೇಳಲಾಗುತ್ತಿದೆಯಾದರೂ ಆಕ್ಷೇಪಣೆ ಹೇಳಿಕೆ ಅಥವಾ ಕೋರ್ಟ್ಗೆ ಸಲ್ಲಿಸಿರುವ ದಾಖಲೆಗಳಲ್ಲಿ ಈ ಬಗ್ಗೆ ಮಾಹಿತಿಯಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.