ಹಸಿರು ಮೇವಿಗೆ ಒತ್ತು: ಒಕ್ಕೂಟ
ಮಂಗಳೂರು: ಪಶು ಆಹಾರಕ್ಕೆ ಬಳಸ್ಪಡುವ ಕಚ್ಚಾ ಪದಾರ್ಥಗಳಿಗೆ ದರ ಹೆಚ್ಚಳವಾದ ಪರಿಣಾಮ ಕರ್ನಾಟಕ ಹಾಲು ಮಹಾಮಂಡಳಿಯು ಮಾ. 1 ರಿಂದ ಪಶು ಆಹಾರದ ಪ್ರತಿ ಟನ್ಗೆ ರು. 2 ಸಾವಿರ ದರ ಹೆಚ್ಚಿಸಲಾಗಿದೆ.
ಒಕ್ಕೂಟ ಮೂಲದಿಂದ ಪ್ರತಿ ಟನ್ನಿನ ಮೇಲೆ ರು. 1500 ಮೊತ್ತವನ್ನು ಆರ್ಥಿಕ ಮೂಲದಿಂದ ಮಾ. 31ರ ತನಕ ಭರಿಸಲಿದೆ. ರು. 500 ದರವನ್ನು ಒಕ್ಕೂಟ ತನ್ನ ಮೂಲಗಳಿಂದ ಭರಿಸಲಿದೆ. ಜಿಲ್ಲೆಯ ಹಾಲು ಉತ್ಪಾದಕರ ಹಿತ ದೃಷ್ಟಿಯಿಂದ ಒಕ್ಕೂಟ ಕೈಗೊಂಡ ರಿಯಾಯಿತಿಯನ್ನು ಸದುಪಯೋಗ ಪಡೆಯಬಹುದು. ರೈತರು ಹಸಿರು ಮೇವನ್ನು ಹೆಚ್ಚು ಬಳಸುವುದರ ಮೂಲಕ ಪಶು ಆಹಾರದ ಅವಲಂಬನೆ ಕಡಿಮೆ ಮಾಡಿಕೊಳ್ಳುವಂತೆ ಒಕ್ಕೂಟದ ನಿರ್ವಾಹಕ ನಿರ್ದೇಶಕ ಡಾ.ಬಿ.ವಿ. ಸತ್ಯನಾರಾಯಣ ಹೇಳಿದ್ದಾರೆ.
10ರಂದು ಕೋಚಿಂಗ್ ಕ್ಲಾಸ್ ಉದ್ಘಾಟನೆ
ಮೂಲ್ಕಿ: ಮೂಲ್ಕಿಯ ಶ್ರೀದುರ್ಗಾಪರಮೇಶ್ವರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ 2013-14ನೇ ಸಾಲಿನ ಪಿಯುಸಿ ಮತ್ತು ಸಿಇಟಿಯ ಉಚಿತ ಕೋಚಿಂಗ್ ಕ್ಲಾಸಿನ 6ನೇ ಬ್ಯಾಚ್ನ ಉದ್ಘಾಟನಾ ಸಮಾರಂಭ ಮಾ.10ರಂದು ಬೆಳಗ್ಗೆ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಳದ ಜ್ಞಾನ ಮಂದಿರದಲ್ಲಿ ಜರುಗಲಿದೆ. ಉದ್ಘಾಟನೆಯನ್ನು ಬೆಂಗಳೂರಿನ ವಿವಿಯ ವಿಶ್ರಾಂತ ಕುಲಪತಿ ಡಾ.ಎನ್.ಆರ್. ಶೆಟ್ಟಿ ನೆರವೇರಿಸಲಿದ್ದಾರೆ.
ಚಂದ್ರಶೇಖರ್ ನಿಧನ
ಉಪ್ಪಿನಂಗಡಿ: ಇಲ್ಲಿನ ಪಂಚಾಯ್ತಿ ಉದ್ಯೋಗಿ, ಜಾಡಮಾಲಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರ್ (45) ಅನಾರೋಗ್ಯದ ಕಾರಣದಿಂದ ಮಂಗಳವಾರ ನಿಧನರಾಗಿದ್ದಾರೆ. ಪ್ರಾಮಾಣಿಕತೆ, ಕರ್ತವ್ಯ ದಕ್ಷತೆ, ಗೌರವಯುತ ಜೀವನ ಪದ್ಧತಿಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಅವರ ಅನಾರೋಗ್ಯದ ಸಂದರ್ಭ ಚಿಕಿತ್ಸೆಯ ವೆಚ್ಚ ಭರಿಸಲು ಉಪ್ಪಿನಂಗಡಿಯ ಗ್ರಾಮದ ಜನತೆ ಸಹಕರಿಸಿದ್ದರು. ಮೃತರ ನಿವಾಸಕ್ಕೆ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಳಿನಾಕ್ಷಿ, ಉಪಾಧ್ಯಕ್ಷ ಗಂಗಾಧರ ಟೈಲರ್, ಜಿಪಂ ಮಾಜಿ ಅಧ್ಯಕ್ಷ ಸೋಮನಾಥ, ವರ್ತಕರ ಸಂಘದ ಅಧ್ಯಕ್ಷ ಜಗದೀಶ್ ಶೆಟ್ಟಿ, ಪಂಚಾಯಿತಿ ಸದಸ್ಯರಾದ ಹರೀಶ್ ನಾಯಕ್, ಅಬ್ಬಾಸ್ ಬಸ್ತಿಕಾರ್, ರಾಮಚಂದ್ರ ಮಣಿಯಾಣಿ, ಕಾರ್ಮಿಕ ಸಂಘಟನೆಯ ಕಾರ್ಯದರ್ಶಿ ಮಹಾಲಿಂಗ ಮೊದಲಾದವರು ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದರು.
ಬೈಕ್ ಡಿಕ್ಕಿಯಾಗಿ ಪಾದಚಾರಿ ಗಂಭೀರ
ಉಪ್ಪಿನಂಗಡಿ: ಇಲ್ಲಿನ ಪೆರಿಯಡ್ಕ ಎಂಬಲ್ಲಿ ಬೈಕ್ ಡಿಕ್ಕಿ ಹೊಡೆದು ಪಾದಚಾರಿ ಕೂಸಪ್ಪ (75) ಎಂಬವರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.
ಗಾಯಾಳು ಕೂಸಪ್ಪ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೈಕ್ ಸವಾರ ಬಾಲಕೃಷ್ಣ ಎಂಬವರ ವಿರುದ್ಧ ದೂರು ದಾಖಲಾಗಿದೆ.