ನಾಳೆ 'ರಾಜ್ಯಮಟ್ಟದ ಮಹಿಳಾ ಸಮಾವೇಶ'
ಮಂಗಳೂರು: ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಹಾಗೂ ಮಹಿಳಾ ಸಂಘಗಳ ಜಾಲ ವತಿಯಿಂದ ಮಾ. 6 ರಿಂದ 8ರವರೆಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಜಾಗೃತಿ ಕಾರ್ಯಕ್ರಮ ನಡೆಯಲಿದೆ.
ಮಾ. 6 ರಂದು ಮಧ್ಯಾಹ್ನ 2ಕ್ಕೆ ಮಂಗಳೂರು ವಿಶ್ವವಿದ್ಯಾಲಯದ ಹಳೆಯ ಸೆನೆಟ್ ಸಭಾಂಗಣದಲ್ಲಿ ಮಹಿಳಾ ಕೇಂದ್ರಿತ ಚಲನಚಿತ್ರ ಪ್ರದರ್ಶನ ನಡೆಯಲಿದೆ. ಸಂಜೆ 4.30 ರಿಂದ 6.30ರ ತನಕ ಹಂಪನಕಟ್ಟೆ ಸರ್ಕಲ್‌ನಿಂದ ವಿಶ್ವವಿದ್ಯಾಲಯ ಕಾಲೇಜಿನವರೆಗೆ ಕಪ್ಪುಡುಗೆ ಧರಿಸಿ, ಮೊಂಬತ್ತಿ ಉರಿಸಿ ಮಾನವ ಸರಪಳಿ ರಚಿಸಲಾಗುವುದು ಎಂದು ಕರಾವಳಿ ವಾಚಕ ವಾಚಕಿಯರ ಸಂಘದ ಮಾಜಿ ಅಧ್ಯಕ್ಷೆ ಚಂದ್ರಕಲಾ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಾ. 7 ರಂದು ಬೆಳಗ್ಗೆ 10ಕ್ಕೆ ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ 'ಮಹಿಳೆಯರ ಮೇಲಿನ ದೌರ್ಜನ್ಯಗಳು: ಕಾರಣಗಳು ವಿಭಿನ್ನ ಆಯಾಮಗಳು' ವಿಷಯದ ಕುರಿತು ಮಂಗಳೂರು ವಿಶ್ವವಿದ್ಯಾಲಯದ ಹಳೆಯ ಸೆನೆಟ್ ಸಭಾಂಗಣದಲ್ಲಿ ನಡೆಯಲಿದೆ. ಮರಾಠಿ ಲೇಖಕಿ ಊರ್ಮಿಳಾ ಪವಾರ್ ಉದ್ಘಾಟಿಸುವರು.
ರಾಜ್ಯಮಟ್ಟದ ಮಹಿಳಾ ಸಮಾವೇಶ: ಮಾ. 8ರಂದು ಮಹಿಳಾ ದೌರ್ಜನ್ಯ ಹಾಗೂ ಭದ್ರತೆಯ ದೃಷ್ಠಿಯಿಂದ ಕರಾವಳಿ ಉತ್ಸವ ಮೈದಾನದಲ್ಲಿ 'ರಾಜ್ಯಮಟ್ಟದ ಮಹಿಳಾ ಸಮಾವೇಶ' ನಡೆಯಲಿದೆ. ಸಮಾವೇಶವನ್ನು ರಾಜಾಸ್ಥಾನದ ವಿಶಾಖ ಗೈಡ್‌ಲೈನ್ಸ್ ಕಾರಣಕರ್ತೆ ಬಾಂವ್ರಿದೇವಿ ಉದ್ಘಾಟಿಸುವರು. ಲೇಖಕಿ ವೈದೇಹಿ ಅಧ್ಯಕ್ಷತೆ ವಹಿಸುವರು ದೌರ್ಜನ್ಯ ವಿರೋಧಿ ವೇದಿಕೆಯ ಮರ್ಲಿನ್ ಮಾರ್ಟಿಸ್ ಹೇಳಿದರು.
ಇದರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 120 ಮಹಿಳಾ ಸಂಘಟನೆಗಳು ಪಾಲ್ಗೊಳ್ಳಲಿದೆ ಎಂದರು. ಜಿಲ್ಲೆಯಲ್ಲಿ ಅತ್ಯಾಚಾರ, ಯುವತಿಯರ ನಾಪತ್ತೆ ಪ್ರಕರಣಗಳು ಹೆಚ್ಚು ನಡೆಯುತ್ತಿದೆ. ಮಂಗಳೂರಿನಲ್ಲಿ ಸಾರ್ವಜನಿಕವಾಗಿ ಮಹಿಳೆಯರು ಬದುಕು ಸಾಗಿಸುವುದು ದುಸ್ತರವಾಗಿದೆ. ಅಲ್ಲದೆ ವಿದ್ಯಾರ್ಥಿಗಳು ಒಂಟಿಯಾಗಿ ವಾಸುತ್ತಿರುವ ಸಂದರ್ಭದಲ್ಲಿ ಸೂಕ್ತ ರಕ್ಷಣೆಯ ಅಗತ್ಯವಿದೆ. ಈ ಉದ್ದೇಶಕ್ಕಾಗಿ ಮಹಿಳಾ ಸಮಾವೇಶ ನಡೆಸಲಾಗುತ್ತಿದೆ ಎಂದರು.
---
9ರಂದು ಡಾ. ಉಪ್ಪಂಗಳ ರಾಮ ಭಟ್‌ಗೆ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ
ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ವಿವೇಕಾನಂದ ಕಾಲೇಜಿನ ಶಿವರಾಮ ಕಾರಂತ ಅಧ್ಯಯನ ಕೇಂದ್ರ ಮತ್ತು ಕನ್ನಡ ಸಂಘಗಳ ಆಶ್ರಯದಲ್ಲಿ ಕೊಡಮಾಡುವ ಸಿದ್ದಮೂಲೆ ಶಂಕರನಾರಾಯಣ ಭಟ್ ಸ್ಥಾಪಿತ 'ಶಂಕರ ಸಾಹಿತ್ಯ ಪ್ರಶಸ್ತಿ' ಗೆ ಸಾಹಿತಿ ಡಾ. ಉಪ್ಪಂಗಳ ರಾಮ ಭಟ್ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಾದ ವಿದ್ಯಾಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ 9 ರಂದು ಕಾಲೇಜಿನಲ್ಲಿ ನಡೆಯಲಿದೆ.
ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಸತ್ಯನಾರಾಯಣ ಮಲ್ಲಿಪಟ್ಟಣ ಮುಖ್ಯ ಅತಿಥಿಯಾಗಿ ಆಗಮಿಸುವರು. ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಬೆಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ದೀಪಿಕಾ ಬಿ, ದ್ವಿತೀಯ ಸ್ಥಾನ ಗಳಿಸಿದ ಕಾಸರಗೋಡಿನ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ದಿವ್ಯಶ್ರೀ ಡಿ. ಹಾಗೂ ತೃತೀಯ ಸ್ಥಾನ ಗಳಿಸಿದ ಮೈಸೂರಿನ ಶಾರದಾ ವಿಲಾಸ ಕಾಲೇಜಿನ ಕಿರಣ್ ಪಿ. ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.