ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ಪುರಸಭಾ ತ್ಯಾಜ್ಯ ವಿಲೇವಾರಿ ಸಂಪೂರ್ಣ ಬೋಗಸ್‌'

Lingaraj Badiger
Updated On : 7 Mar 2013, 11:53 am

ಪುತ್ತೂರು: ಪುತ್ತೂರು ಪುರಸಭೆಯ ತ್ಯಾಜ್ಯ ವಿಲೇವಾರಿಯನ್ನು ಬೇನಾಮಿ ಹೆಸರಿನಲ್ಲಿ ಖಾಸಗಿ ವ್ಯಕ್ತಿಗೆ ಸಂಗ್ರಹಿಸಲು ನೀಡಿ ಲಕ್ಷಾಂತರ ಹಣ ದುರುಪಯೋಗ ಪಡಿಸಿಕೊಳ್ಳಲಾಗಿದ್ದು, ಆಡಳಿತವು ಭ್ರಷ್ಟಾಚಾರಕ್ಕೆ ಪರೋಕ್ಷ ಬೆಂಬಲ ನೀಡುವ ಕೆಲಸ ಮಾಡಿದೆ ಎಂದು ಪುರಸಭೆ ವಿಪಕ್ಷ ನಾಯಕ ಎಚ್.ಮಹಮ್ಮದ್ ಆಲಿ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಚ್ಛ, ಕುಡಿಯುವ ನೀರಿನ ಬಗ್ಗೆ ಏನೂ ಮುತುವರ್ಜಿ ವಹಿಸದೆ ಪುನಃ ಬಿಜೆಪಿ ತಮ್ಮ ಪ್ರಣಾಳಿಕೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ, ಕುಡಿಯುವ ನೀರಿನ ವ್ಯವಸ್ಥೆಯನ್ನು ದಿನದ 24 ಗಂಟೆಯೂ ಕಲ್ಪಿಸುತ್ತೇವೆ ಎಂದಿದ್ದಾರೆ. ತ್ಯಾಜ್ಯ ಸಂಗ್ರಹದ ಜವಾಬ್ದಾರಿಯನ್ನು ಸ್ವ ಸಹಾಯ ಸಂಘಗಳು ನಿರ್ವಹಿಸಬೇಕು ಎಂಬ ಕಾನೂನು ಇದೆ. ಈ ಹಿನ್ನಲೆಯಲ್ಲಿ ಸುರಭಿ ಸ್ವ-ಸಹಾಯ ಸಂಘದ ಕಸವಿಲೇವಾರಿ ಜವಾಬ್ದಾರಿಯನ್ನು ಪುತ್ತೂರು ನಗರದಲ್ಲಿ ವ್ಯಕ್ತಿಯೊಬ್ಬರು ವಹಿಸಿಕೊಂಡಿದ್ದಾರೆ. ಆದರೆ ಈತನಿಗೂ ಸುರಭಿ ಸ್ವಸಹಾಯ ಸಂಘದವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಇಷ್ಟು ಮಾತ್ರವಲ್ಲದೆ ಉಳ್ಳಾಲ್ತಿ ಸ್ವ-ಸಹಾಯ ಸಂಘ ಎಂಬ ಇನ್ನೊಂದು ಬೇನಾಮಿ ಸಂಘದ ಹೆಸರಿನಲ್ಲಿ ಹಣವನ್ನು ಈ ವ್ಯಕ್ತಿಯೇ ಪಡೆದುಕೊಳ್ಳುತ್ತಿದ್ದಾರೆ. ಆದರೆ ಈತ ಯಾವ ಸಂಘದ ಸದಸ್ಯನೂ ಅಲ್ಲ. ಮಾತ್ರವಲ್ಲದೆ ಈತ ದಿನನಿತ್ಯ ಕಸವಿಲೇವಾರಿಗೂ ಹೋಗುತ್ತಿಲ್ಲ. ಆದರೂ ಪುರಸಭೆ ಈತನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನಕಲಿ ರಶೀದಿ ನೀಡಿ ಲಕ್ಷಾಂತರ ರುಪಾಯಿ ಹಣ ಸಂಗ್ರಹ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಇದೀಗ ರಾಜ್ಯದಲ್ಲಿ ಕೋರ್ಟ್ ಅದಾಲತ್ ನಡೆಯುತ್ತಿದ್ದು, ಪುರಸಭೆಯವರು ಪುತ್ತೂರಿನಲ್ಲಿ ಶೇ.50ರಷ್ಟು ಮನೆ ಮನೆ ಸ್ವಚ್ಛತೆ ಆಗುತ್ತಿದೆ ಎಂದು ಹೇಳಿ ಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಅವರು ದೂರಿದರು.
ಡೀವಿಗೆ ತರಾಟೆ: ಒಬ್ಬ ಪಂಚಾಯಿತಿ ಸದಸ್ಯ ಮಾಡುವಷ್ಟು ಕೆಲಸವನ್ನು ಡಿ.ವಿ. ಸದಾನಂದ ಗೌಡ ತನ್ನ ಮುಖ್ಯಮಂತ್ರಿ ಸ್ಥಾನದಲ್ಲಿರುವಾಗ ಮಾಡಲು ಸಾಧ್ಯವಾಗಿಲ್ಲ. ಮೊದಲು ತನ್ನ ಅಧಿಕಾರವಧಿಯಲ್ಲಿ ಪುತ್ತೂರಿಗೆ ಯಾವ ರೀತಿಯ ಕೊಡುಗೆ ನೀಡಿದ್ದೇನೆ ಎಂಬುವುದನ್ನು ಸ್ವಲ್ಪ ಜ್ಞಾಪಿಸಿಕೊಳ್ಳಲಿ ಎಂದು ಅವರು ಎಚ್ಚರಿಸಿದರು.
ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ಕಾಂಗ್ರೆಸ್ ಅಭ್ಯರ್ಥಿಗಳಾದ ಅನ್ವರ್ ಖಾಸಿಂ, ರೇಖಾ ಯಶೋಧರ್ ಸುದ್ದಿಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement