ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮತಗಟ್ಟೆಗಳಲ್ಲಿ ಫ್ಯಾನ್ ತಿರುಗಲ್ಲ!

Mainashree
Updated On : 7 Mar 2013, 12:04 pm

ಕ.ಪ್ರ. ವಾರ್ತೆ  ಮಂಗಳೂರು  ಮಾ.6-
ಕರಾವಳಿಯಲ್ಲಿ ಬಿಸಿಲ ಧಗೆ ಹೆಚ್ಚುತ್ತಿದ್ದು, ಚುನಾವಣೆ ಕಾವು ಮತ್ತಷ್ಟು ತಾಪಮಾನ ಏರಿಸಿದೆ. ಈ ನಡುವೆ, ವಿಚಿತ್ರವೆಂದರೆ ಬಿಎಸ್‌ಆರ್ ಕಾಂಗ್ರೆಸ್ ಚಿಹ್ನೆ ಫ್ಯಾನ್ ಆದ ಕಾರಣ ಅಂಥ ಅಭ್ಯರ್ಥಿಗಳು ಎಲ್ಲೆಲ್ಲಿ ಸ್ಪರ್ಧಿಸುತ್ತಿದ್ದಾರೋ ಆ ಮತಗಟ್ಟೆಗಳಲ್ಲಿ ಫ್ಯಾನ್ ಹಾಕುವಂತಿಲ್ಲ!
60 ವಾರ್ಡ್‌ಗಳಿರುವ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಗಳು 18 ವಾರ್ಡ್‌ಗಳಲ್ಲಿ ಸ್ಪರ್ಧಿದ್ದಾರೆ. ಈ ವಾರ್ಡ್‌ಗಳ 70 ಬೂತ್‌ಗಳಲ್ಲಿ ಫ್ಯಾನ್ ಹಾಕದಿರಲು ಆದೇಶಿಸಲಾಗಿದೆ.

ನೀತಿ ಸಂಹಿತೆ ಪರಿಣಾಮ: ಚುನಾವಣೆ ನೀತಿ ಸಂಹಿತೆಯಂತೆ ಮತಗಟ್ಟೆ ಮತ್ತು ಪರಿಸರದಲ್ಲಿ ಚುನಾವಣೆ ಚಿಹ್ನೆಗಳನ್ನು ಪ್ರದರ್ಶಿಸುವಂತಿಲ್ಲ. ಪರಿಣಾಮ ಮತಗಟ್ಟೆಯಲ್ಲಿ ಫ್ಯಾನ್ ಇದ್ದರೂ ಬಿಸಿಲ ಬೇಗೆ ಅನುಭವಿಸುವಂತಾಗಿದೆ. ಮತದಾರರಿಗೆ ಸ್ವಲ್ಪ ಹೊತ್ತಿನಲ್ಲಿ ಮತ ಹಾಕಿ ಬರಬಹುದು. ಅದರೆ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತಗಟ್ಟೆಯಲ್ಲಿ ಇರುವ ಸಿಬ್ಬಂದಿ ಕಥೆ ಕೇಳುವರ್ಯಾರು?

ಕಿತ್ತು ಹಾಕಲು ಕಷ್ಟ: 'ಮತಗಟ್ಟೆಗಳಲ್ಲಿ ಫ್ಯಾನ್ ಕಿತ್ತು ಕಿತ್ತು ತೆಗೆದರೆ ಮತ್ತೆ ಅಳವಡಿಸಬೇಕಾಗುತ್ತದೆ. ಅದಕ್ಕೆ  ಅದನ್ನು ಚುನಾವಣೆ ದಿನ ಮರೆ ಮಾಚಲು ಸಲಹೆ ನೀಡಲಾಗಿದೆ' ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್ ತಿಳಿಸಿದ್ದಾರೆ.
ಶಾಲಾ ಗೋಡೆಗಳಲ್ಲಿ 'ರಾಷ್ಟ್ರೀಯ ಹೂ' ಹೆಸರಲ್ಲಿ ಕಮಲ ಚಿತ್ರವಿತ್ತು. ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ಕೊಡೆ, ಆನೆ ಇನ್ನಿತರ ಚಿತ್ರಗಳೂ ಇದ್ದವು. ಅವುಗಳನ್ನೂ ಮರೆ ಮಾಚಲು ಚುನಾವಣೆ ಅಧಿಕಾರಿಗಳು ಸೂಚಿಸಿದ್ದಾರೆ.

ಇನ್ನು ಬಳ್ಳಾರಿ ಬಿಸಿಲಿಗೆ ಹೇಗೋ?!: ಬಿಎಸ್‌ಆರ್ ಕಾಂಗ್ರೆಸ್ ರಾಜ್ಯಾದ್ಯಂತ ಸ್ಪರ್ಧಿಸುತ್ತಿದೆ. ಮಂಗಳೂರಿಗಿಂತಲೂ ಬಳ್ಳಾರಿ ಮತ್ತಷ್ಟು ಬಿಸಿ, ಅಲ್ಲಿ ಎಲ್ಲೆಡೆ ಬಿಎಸ್‌ಆರ್ ಕಾಂಗ್ರೆಸ್ ಸ್ಪರ್ಧಿಸುತ್ತಿದೆ. ಅಲ್ಲಿನ ಮತಗಟ್ಟೆಗಳ ಉಷತೆ ಮತ್ತಷ್ಟು ಏರಲಿದೆ! ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದೆಲ್ಲೆಡೆ ಮತಗಟ್ಟೆಗಳಲ್ಲಿ ಫ್ಯಾನ್ ತೆಗೆಯಬೇಕಾಗುವುದೇನೋ?

ಚೆಕ್  ಬೌನ್ಸ್ ಬಿಸಿ
ಅಭ್ಯರ್ಥಿಯೊಬ್ಬರು ಪ್ರಚಾರಕ್ಕಾಗಿ ಸ್ಥಳೀಯ ಚಾನೆಲ್‌ಗಳಿಗೆ ಜಾಹೀರಾತು ನೀಡಿದ್ದರು. ಆದರೆ ಅವರು ನೀಡಿದ ಚೆಕ್ ಹಿಡಿದು ಬ್ಯಾಂಕ್‌ಗೆ ಹೋದರೆ ಬೌನ್ಸ್ ಆಗಿದೆ. ಜಾಹೀರಾತು ಪ್ರತಿನಿಧಿಗಳು ಪಕ್ಷದ ಕಚೇರಿಗೆ ಹೋದರೆ ಅಲ್ಲಿ ಇವರಂತೆ ಅನೇಕ ಮಂದಿ ಗಣ್ಯರು ಅಭ್ಯರ್ಥಿಯನ್ನು ಕಾಯುತ್ತಿದ್ದರು. ಜಾಹೀರಾತು ಪ್ರತಿನಿಧಿ ಕಚೇರಿಗೆ ಬಂದ ಕೂಡಲೇ ಎಲ್ಲರೂ ಅವರನ್ನು ಮುತ್ತಿ, ಹಣ ಕೇಳತೊಡಗಿದ್ದರು! ಏಕೆಂದರೆ ಅವರೆಲ್ಲರೂ ಬಾಕಿ ಹಣ ವಸೂಲಿಗೆ ಬಂದವರು.  'ಈಗ ಬೆಂಗಳೂರಿಂದ ಒಬ್ಬರು ಬರುತ್ತಾರೆ ಅವರು ನಿಮಗೆ ಹಣ ನೀಡುತ್ತಾರೆ' ಎಂದು ಅಭ್ಯರ್ಥಿ ಹೇಳಿದ್ದರು. ಅದ್ದರಿಂದ ಜಾಹೀರಾತು ಪ್ರತಿನಿಧಿಯೇ ಬೆಂಗಳೂರಿನಿಂದ ಬಂದವರು ಎಂದು ತಿಳಿದು ಹಣಕ್ಕಾಗಿ ಮುತ್ತಿದ್ದರು. ತಾನೂ ಹಣ ಪಡೆಯಲು ಬಂದಿದ್ದೇನೆ ಎಂದ ಬಳಿಕ ಅವರನ್ನು ಬಿಟ್ಟರು. ಇದೀಗ ಪಕ್ಷದ ಕಚೇರಿಗೆ ಅಭ್ಯರ್ಥಿ ಬೀಗ ಹಾಕಿ ಹೋಗಿದ್ದರೆ ಹಣ ಬರಬೇಕಾದವರು ತಾವು ಒಂದು ಬೀಗ ಹಾಕಿ ಹೋಗಿದ್ದಾರೆ!

- ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement