ಮತಗಟ್ಟೆಗೆ ಅಧಿಕಾರಿಗಳ ದಂಡು
ಬಂಟ್ವಾಳ: ಇಲ್ಲಿನ ಪುರಸಭಾ ಚುನಾವಣೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಚುನಾವಣೆಗೆ ಸಂಬಂಧಿಸಿ ಮತಗಟ್ಟೆಗೆ ನಿಯೋಜಿಸಲ್ಪಟ್ಟ ಅಧಿಕಾರಿಗಳ ದಂಡು ಮತಯಂತ್ರದೊಂದಿಗೆ ಬುಧವಾರವೇ ಮತಗಟ್ಟೆಗೆ ತೆರಳಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ 31 ಮತಗಟ್ಟೆಯಲ್ಲಿ ಗುರುವಾರ ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.
ಪುರಸಭಾ ವ್ಯಾಪ್ತಿಯಲ್ಲಿ ಒಟ್ಟು 28,268 ಮಂದಿ ಮತದಾರರಿದ್ದು, 14268 ಮಂದಿ ಗಂಡಸರು 14030 ಮಂದಿ ಹೆಂಗಸರು ಮತದಾನದ ಹಕ್ಕು ಚಲಾಯಿಸಲಿದ್ದಾರೆ.
12 ಸೂಕ್ಷ್ಮ, 11 ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಉಳಿದವುಗಳನ್ನು ಸಾಮಾನ್ಯ ವಾರ್ಡ್ಗಳೆಂದು ಪರಿಗಣಿಸಲಾಗಿದೆ.
23 ವಾರ್ಡ್ಗಳನ್ನು ಹೊಂದಿರುವ ಬಂಟ್ವಾಳ ಪುರಸಭೆಗೆ 82 ಮಂದಿ ಕಣದಲ್ಲಿದ್ದಾರೆ.
ತಹಸೀಲ್ದಾರ್ ಮಲ್ಲೇಸ್ವಾಮಿ ಉಸ್ತುವಾರಿಯಲ್ಲಿ ಮತದಾನಕ್ಕೆ ಎಲ್ಲಾ ರೀತಿಯಲ್ಲೂ ತಾಲೂಕು ಆಡಳಿತ ಸಜ್ಜಾಗಿದೆ. ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸರನ್ನು ಕಾದಿರಿಸಲಾಗಿದೆ.
ಡಿವೈಎಸ್ಪಿ-1, ಸಿ.ಐ-1, ಎಸ್ಐ-6, ಎಎಸ್ಐ-10, ಎಚ್ಸಿ, ಪಿಸಿ- 125 ಹೋಮ್ಗಾರ್ಡ್- 10, ಕೆಎಸ್ಆರ್ಪಿ- 1, ಡಿಆರ್- 1 ಹಾಗೂ ಮಹಿಳಾ ಸಿಬ್ಬಂದಿಯನ್ನು ನೇಮಿಸಲಾಗಿದೆ.
11ರಂದು ಮತ ಎಣಿಕೆ ನಡೆಯಲಿದ್ದು, ಬಿ.ಸಿ. ರೋಡ್ನ ಆಶ್ರಮ ಶಾಲಾ ಪಕ್ಕದಲ್ಲಿರುವ ಸಾಮರ್ಥ್ಯ ಸೌಧ ಕಟ್ಟಡದಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ.
ಕಾವೇರಿದ ಪ್ರಚಾರ ಕಾರ್ಯ
ಮತದಾರರ ಮನವೊಲಿಸುವ ಅಂತಿಮ ಹಂತದ ಕಸರತ್ತಿನಲ್ಲಿ ರಾಜಕೀಯ ಪಕ್ಷಗಳು ನಿರತವಾಗಿವೆ.ಮನೆಮನೆ ಭೇಟಿ, ಕರಪತ್ರ ಹಂಚಿಕೆ, ಜಾಹಿರಾತು, ಬಂಟಿಂಗ್ಸ್ ಪ್ರಚಾರ ನಡೆಯುತ್ತಿರುವುದರ ಮಧ್ಯೆ ಹಣ ಹಂಚಿಕೆ, ಹೋಮ ಹವನ, ಪ್ರಚಾರ, ಅಪಪ್ರಚಾರಗಳೂ ನಡೆದಿದೆ ಎನ್ನಲಾಗಿದೆ. ಈ ನಡುವೆ ಮತಯಾಚನೆಗೆ ಬಂದ ರಾಜಕೀಯ ಪಕ್ಷಗಳ ಮುಖಂಡರನ್ನು ಕೆಲ ವಾರ್ಡ್ಗಳಲ್ಲಿ ಮತದಾರರು ತಡೆದು ಮತಯಾಚನೆಗೆ ಅಡ್ಡಿಪಡಿಸಿದ್ದಾರೆ.