ಮಾದರಿ ಗ್ರಾಮ ವಿಕಾಸ ಪ್ರೇರಕಿ ಪಾತುಂಞ
ಕನ್ನಡಪ್ರಭ ವಾರ್ತೆ ಮಂಗಳೂರು ಮಾ.6-
ಜೈಮಾತಾ, ಭಾರತ್ ಮಾತಾ, ಶ್ರೀಮಾತಾ, ಫಾಲ್ಗುಣಿ, ಅನುಗ್ರಹ...
ಇದು ಯಾವುದೋ ಹೋರಾಟದ ಘೋಷಣೆಯಲ್ಲ. ಮುಸ್ಲಿಂ ಮಹಿಳೆಯೊಬ್ಬರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಸ್ವಸಹಾಯ ಗುಂಪುಗಳ ಹೆಸರು. ಕಳೆದ 25 ವರ್ಷಗಳಿಂದ ಜಾತಿಮತ ಭೇದವಿಲ್ಲದೆ ಸ್ವಸಹಾಯ ಗುಂಪುಗಳ ಚಟುವಟಿಕೆ ನಡೆಸುತ್ತಾ ಸಾಮರಸ್ಯದ ಸ್ವಾವಲಂಬಿ ಬದುಕು ನಡೆಸುತ್ತಿರುವ ಪಾತುಂಞ, ಈಗ ಹಳ್ಳಿ ಹೆಂಗಳೆಯರ ಜೀವನಕ್ಕೂ ದಾರಿದೀಪವಾಗಿದ್ದಾರೆ.
ಮಂಗಳೂರು ತಾಲೂಕಿನ ಮೂಡುಶೆಡ್ಡೆ ಪಿಲಿಕುಳ ನಿಸರ್ಗಧಾಮ ಬಳಿಯ ಎದುರು ಪದವು ಎಂಬಲ್ಲಿನ ಗ್ರಾಮಾಭಿವೃದ್ಧಿ ಸಂಘದಲ್ಲಿ ಪಾತುಂಞಗೆ ಬಿಡುವಿಲ್ಲದ ಚಟುವಟಿಕೆ. ಸಾಮಾನ್ಯವಾಗಿ ಮುಸ್ಲಿಂ ಮಹಿಳೆಯರೆಂದರೆ ಮನೆಯಿಂದ ಹೊರಬರುವುದು ಕಡಿಮೆ ಎನ್ನುವ ಕಾಲಘಟ್ಟದಲ್ಲಿ ಸಮಾಜದ ಮಹಿಳೆಯರನ್ನು ಒಗ್ಗೂಡಿಸುವ ಕೆಲಸಕ್ಕೆ ಮುಂದಾಗಿರುವ ಇವರು ಓದಿದ್ದು 4ನೇ ತರಗತಿ. ಈಗ ವಯಸ್ಸು 56 ದಾಟಿದೆ, ಪತಿ ಮಹಮ್ಮದ್ ಕೂಲಿ ಕೆಲಸದ ಜತೆ ಪತ್ನಿಯ ಕೆಲಸಕ್ಕೆ ಸಾಥ್ ನೀಡುತ್ತಾರೆ. ಎಂಟು ಮಂದಿ ಮಕ್ಕಳಲ್ಲಿ ಅಪ್ಸತ್ ಅಮ್ಮನ ಜತೆ ಕೈಜೋಡಿಸುತ್ತಾಳೆ.
ಸಾಕ್ಷರರಾದರು: ಗಂಜಿಮಠದಿಂದ ಮದುವೆಯಾಗಿ ಇಲ್ಲಿಗೆ ಬಂದ ಮೇಲೆ ಸಾಕ್ಷರತೆ ಆಂದೋಲನಕ್ಕೆ ಧುಮುಕಿದ ಪಾತುಂಞ, 1991ರಿಂದ ಸಾಕ್ಷರತಾ ಪ್ರೇರಕಿಯಾಗಿ 200ಕ್ಕೂ ಹೆಚ್ಚಿನ ಅನಕ್ಷರಸ್ಥರಿಗೆ ಅಕ್ಷರ ಕಲಿಸಿದ್ದಾರೆ. ನವಸಾಕ್ಷರ ಸಂಘಟನೆಯ ಮುಖಂಡರಾದ ಶೀನ ಶೆಟ್ಟಿ, ಕೃಷ ಮೂಲ್ಯರ ಪ್ರೇರಣೆಯಿಂದ ತಾನು ಈ ಕೆಲಸಕ್ಕೆ ಧುಮುಕಿದ್ದಾಗಿ ಹೇಳುತ್ತಾರೆ. ವಿಧವಾ ವೇತನ, ಅಂಗವಿಕಲರಿಗೆ ನೆರವು, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವಲ್ಲಿನ ಮುತುವರ್ಜಿ, ಕುಡಿತದ ಚಟವನ್ನು ಬಿಡಿಸಿ ನೆಮ್ಮದಿಯ ಬದುಕು ಕಲ್ಪಿಸಿದ್ದು ಈಕೆಯ ಹೆಗ್ಗಳಿಕೆ.
ಊರಿಗೆ ಫಿನಾಯಿಲ್, ಸೋಪ್: ಊರಿನ ಮಹಿಳೆಯರ ಗುಂಪು ಕಟ್ಟಿಕೊಂಡು ಸ್ವ ಉದ್ಯೋಗಕ್ಕೆ ಇಳಿದ ಪಾತುಂಞ, ಮನೆಯಲ್ಲೇ ತಯಾರಿಸುವ ಫಿನಾಯಿಲ್, ವಿವಿಧ ಬಗೆಯ ಸೋಪು, ಮುತ್ತಿನ ಮಾಲೆ, ಕ್ಯಾಂಡಲ್ ತಯಾರಿಗೆ ಮುಂದಾದರು. ಇದು ತಿಂಗಳಿಗೆ 2 ಸಾವಿರ ಲಾಭ ತಂದುಕೊಟ್ಟಿತು.
ಸಿದ್ಧಪಡಿಸಿದ ಉತ್ಪನ್ನವನ್ನು ಜನಶಿಕ್ಷಣ ಟ್ರಸ್ಟ್ ಬ್ರಾಂಡ್ನಡಿ ಸುತ್ತಮುತ್ತ ಮಾರುಕಟ್ಟೆಗೆ ಒದಗಿಸುತ್ತಾರೆ. ಊರಿನ ಸುಮಾರು 30ರಿಂದ 40 ಮಹಿಳೆಯರು ಸ್ವಉದ್ಯೋಗದಲ್ಲಿ ತೊಡಗಿಸಿಕೊಂಡು ತಮ್ಮ ಅಗತ್ಯದ ಖರ್ಚಿಗೆ ಬೇಕಾಗುವಷ್ಟು ದುಡಿದುಕೊಳ್ಳುತ್ತಾರೆ ಎನ್ನುತ್ತಾರೆ ಪಾತುಂಞ.
ಇವರ ಸ್ವಸಹಾಯ ಸಂಘದಲ್ಲಿ 78 ಸದಸ್ಯರಿದ್ದು, ಹೆಚ್ಚಿನವರು ಹಿರಿಯ ಮಹಿಳೆಯರು. ಈಗ 2 ಲಕ್ಷಕ್ಕೂ ಅಧಿಕ ಉಳಿತಾಯವಾಗಿದೆ. ಹೆಚ್ಚಿನ ಸದಸ್ಯರು ಪ್ರತಿ ದಿನ ಸೇರುತ್ತಾರೆ. ಮಹಿಳಾಭ್ಯುದಯ ಬಗ್ಗೆ ಚರ್ಚಿಸುತ್ತಾರೆ. ಇಲ್ಲಿ ಯಾವುದೇ ಜಾತಿಯ ಅಡ್ಡಗೋಡೆ ಬಂದಿಲ್ಲ. ಇವರೆಲ್ಲರಿಗೂ ಪಾತುಂಞಯೇ ಮಾರ್ಗದರ್ಶಿ.
ಟೈಲರಿಂಗ್ ತರಬೇತಿ: ಕಳೆದ 2 ತಿಂಗಳಿಂದ ಇಲ್ಲಿ ಟೈಲರಿಂಗ್ ತರಬೇತಿ ಪ್ರಾರಂಭವಾಗಿದೆ. ಪ್ರತಿದಿನ ಮಧ್ಯಾಹ್ನ ಟೈಲರಿಂಗ್ ಕಲಿಸಲಾಗುತ್ತಿದೆ. 20 ಮಂದಿ ಟೈಲರಿಂಗ್ ತರಬೇತಿಯಲ್ಲಿ ಈಗಲೇ ವಿವಿಧ ವಿನ್ಯಾಸದ ಬಟ್ಟೆಚೀಲ ತಯಾರಿಸುತ್ತಿದ್ದಾರೆ. ಇನ್ನಷ್ಟು ಬಟ್ಟೆಚೀಲ ಹೊಲಿಯಬೇಕು ಎಂಬ ಬಯಕೆ ಇದ್ದರೂ, ಟೈಲರಿಂಗ್ ಯಂತ್ರದ ಕೊರತೆ, ಹೊಸ ಯಂತ್ರ ಖರೀದಿಗೆ ಆರ್ಥಿಕ ಚೈತನ್ಯ ಸಾಲದು.
ಸಮಾಜ ಅಭಿವೃದ್ಧಿ ಕಾರ್ಯಕ್ಕೆ ಪಾತುಂಞಗೆ (7411774717) ಕರಾವಳಿ ಲೇಖಕಿಯರ ಸಮ್ಮೇಳನದಲ್ಲಿ ಸನ್ಮಾನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತಾಲೂಕಿನ ಸಾಧಕಿ ಎಂದು ಗೌರವ, ಗ್ರಾಮಾಭಿವೃದ್ಧಿ ಸಂಘದ 25ನೇ ವಾರ್ಷಿಕೋತ್ಸವದಲ್ಲಿ ಅಭಿನಂದನೆ ಸಿಕ್ಕಿದೆ.
- ಆತ್ಮಭೂಷಣ್