ರಂಗ ಮಂದಿರ ಸ್ಥಾಪನೆ ಕನಸಾಗಿ ಉಳಿದಿದೆ: ಪುನರೂರು ವಿಷಾದ
ಮಂಗಳೂರು: ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಪ್ರತ್ಯೇಕ ರಂಗ ಮಂದಿರದ ಸ್ಥಾಪನೆಗೆ ಕಳೆದ 30 ವರ್ಷದಿಂದ ಸರ್ಕಾರದಲ್ಲಿ ಪ್ರಸ್ತಾಪ ಸಲ್ಲಿಸಿದ್ದರೂ, ಯಾವುದೇ ಉಪಯೋಗವಾಗಿಲ್ಲ. ಪುರಭವನವೇ ಗತಿ ಎಂಬಂತಾಗಿದೆ ಎಂದು ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದ್ದಾರೆ.
ಸೋಮವಾರ ರಂಗಸ್ಪಂದನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಪುರಭವನದಲ್ಲಿ ನಡೆದ ಸಾಂಸ್ಕೃತಿಕ ರಂಗಸುಗ್ಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯನ್ನು ಉಳಿಸುವಲ್ಲಿ ರಂಗಭೂಮಿಗಳ ಪಾತ್ರ ಹಿರಿದಾಗಿದ್ದು, ಮುಂದಿನ ಪೀಳಿಗೆಗೂ ಇವುಗಳ ಮಹತ್ವ ತಿಳಿಸುವಲ್ಲಿ ಪ್ರಯತ್ನಿಸಬೇಕಾಗಿದೆ. ಸರ್ಕಾರದ ಮಾರಕ ಯೋಜನೆಗಳಿಗೆ ತುಳುನಾಡು ನಾಶಗೊಳ್ಳುತ್ತಿದ್ದು, ಇಲ್ಲಿನ ಜನತೆ ಎಚ್ಚೆತ್ತುಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದರು.
ಹಿರಿಯ ತುಳು ಚಲನಚಿತ್ರ ನಿರ್ದೇಶಕ ಪಿ. ಸಂಜೀವ ದಂಡಕೇರಿ ಕಾರ್ಯಕ್ರಮ ಉದ್ಘಾಟಿಸಿದರು. ಪುರಭವನದಲ್ಲಿ ಜಾನಪದ ನೃತ್ಯ, ಸುಗಮ ಸಂಗೀತ, ಯಕ್ಷಗಾನ ಬಯಲಾಟ ಕಾರ್ಯಕ್ರಮಗಳು ಮೂರು ದಿನ ನಡೆಯಲಿದೆ.
ಸಭೆಯಲ್ಲಿ ಮದಿಮೆ ಚಿತ್ರದ ನಿರ್ಮಾಪಕ ಮಾಲಾಡಿ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಪಿ.ಬಿ. ಹರೀಶ್ ಕುಮಾರ್ ರೈ ಇದ್ದರು.
--
ಹರಿಹರ ಪಲ್ಲತ್ತಡ್ಕ ಬಿಎಸ್ಸೆನ್ನೆಲ್
ಕಚೇರಿಗೆ ಗ್ರಾಮಸ್ಥರ ಮುತ್ತಿಗೆ
ಸುಬ್ರಹ್ಮಣ್ಯ: ಹರಿಹರ ಪಲ್ಲತ್ತಡ್ಕದಲ್ಲಿ ಕಾರ್ಯಾಚರಿಸುತ್ತಿರುವ ಬಿಎಸ್ಎನ್ಎಲ್ ಕಚೇರಿಗೆ ಇತ್ತೀಚೆಗೆ ಗ್ರಾಮಸ್ಥರು ದಿಢೀರ್ ಮುತ್ತಿಗೆ ಹಾಕಿ ಕಚೇರಿಗೆ ಆಗಮಿಸಿದ್ದ ಉಪಮಂಡಲ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಹರಿಹರ ಪಲ್ಲತ್ತಡ್ಕ ಮತ್ತು ಕೊಲ್ಲಮೊಗ್ರ ಗ್ರಾ.ಪಂ ವ್ಯಾಪ್ತಿಯ ಬಿಎಸ್ಸೆನ್ನೆಲ್ ಕೇಂದ್ರದ ಸೇವೆ ಕಳೆದ ಕೆಲವು ಸಮಯಗಳಿಂದ ಸಂಪೂರ್ಣ ನಿಷ್ಕ್ರಿಯಗೊಂಡಿತ್ತು. ಹಗಲು- ರಾತ್ರಿ ನೆಟ್ವರ್ಕ್ ಸಿಗುತ್ತಿರಲಿಲ್ಲ. ಇತ್ತೀಚೆಗೆ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡ ಹಿನ್ನೆಲೆಯಲ್ಲಿ ಕೃಷಿಕರು ದೂರವಾಣಿ ಸಂಪರ್ಕ ಇಲ್ಲದೆ ತೊಂದರೆಗೊಳಗಾಗಿದ್ದರು. ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸದೆ ಇದ್ದುದರಿಂದ ಅಧಿಕಾರಿಗಳು ಕಚೇರಿಗೆ ಆಗಮಿಸುವ ಮುನ್ಸೂಚನೆ ತಿಳಿದ ಗ್ರಾಮಸ್ಥರು ಕೇಂದ್ರಕ್ಕೆ ಆಗಮಿಸಿ ಇಲಾಖೆಯ ಉಪ ವಿಭಾಗೀಯ ಅಧಿಕಾರಿ ರಾಮಕೃಷ್ಣ ಭಟ್ ಅವರೊಂದಿಗೆ ವಾಗ್ವಾದ ನಡೆಸಿದರು. ಅಧಿಕಾರಿ ಗ್ರಾಮಸ್ಥರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಆದರೆ ಸಮಾಧಾನಗೊಳ್ಳದ ಗ್ರಾಮಸ್ಥರು ಶಾಶ್ವತ ಪರಿಹಾರ ಒದಗಿಸಬೇಕು. ವಿದ್ಯುತ್ ಸಮಸ್ಯೆ ಇದ್ದರೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಎಲ್ಲ ಸಮಯದಲ್ಲೂ ಸೇವೆ ಇರುವಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು. ನಂತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ದುರ್ಗಾದಾಸ್ ಮಲ್ಲಾರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ದಿವಾಕರ ಮುಂಡಾಜೆ, ಮುರಳೀಧರ ದೊಡ್ಡಕಜೆ, ಸಂತೋಷ್ ಪಳಂಗಾಯ, ಪ್ರದೀಪ್ ಕಜ್ಜೋಡಿ, ದಿನೇಶ್ ಎಲ್ಲಪಡ್ಕ ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
--
ನಾಳೆ ಕಾರ್ಯಾಗಾರ
ಮಂಗಳೂರು: ಸುರತ್ಕಲ್ ಎನ್ಐಟಿಕೆ ಪ್ರಬಂಧ ವಿಭಾಗದಿಂದ ಮಾ. 8 ಮತ್ತು 9ರ ತನಕ ಕಾರ್ಯಾಗಾರ ನಡೆಯಲಿದೆ.'ಮೆನೇಜ್ಮೆಂಟ್ ಆಫ್ ಹ್ಯೂಮನ್ ರಿಸೋರ್ಸಸ್ ಇನ್ ಎ ಟೆಕ್ನಾಲಜಿ ಡ್ರಿವನ್ ಇಕಾನಮಿ' ಎಂಬ ವಿಷಯದಲ್ಲಿ ಕಾರ್ಯಾಗಾರ ನಡೆಯಲಿದೆ. ಆಸಕ್ತ ಎಂಬಿಎ ವಿದ್ಯಾರ್ಥಿಗಳು, ಮಾನವ ಸಂಪನ್ಮೂಲದ ಸಂಶೋದನಾರ್ಥಿಗಳು, ಕೈಗಾರಿಕಾ ಪ್ರತಿನಿಧಿಗಳು, ಶಿಕ್ಷಕರು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಡಾ. ಶಶಿಕಾಂತ ಕೌಡೂರು-9448105458 ಸಂಪರ್ಕಿಸಬಹುದು.
ಹಾಲು, ನೀರಿಗೆ ದರ ಏರಿಕೆ: ಮಹಿಳಾ ಕಾಂಗ್ರೆಸ್ ಆರೋಪ
ಮಂಗಳೂರು: ದೇವರು, ಧರ್ಮ ಹೆಸರಲ್ಲಿ ಪರಸ್ಪರ ಎತ್ತಿಕಟ್ಟಿ ಆಡಳಿತ ಪಡೆದ ಬಿಜೆಪಿ ಬಳಿಕ ಹಾಲಿಗೆ, ಕುಡಿಯುವ ನೀರಿಗೆ ದರ ಏರಿಕೆ ಮಾಡಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದರು. ಮಹಿಳೆಯರ ಮೇಲಿನ ಆತ್ಯಾಚಾರ, ದೌರ್ಜನ್ಯ ತಡೆಯಲು ಕೇಂದ್ರ ಸರ್ಕಾರ ನಿರ್ಭಯಾ ಯೋಜನೆ ಜಾರಿಗೆ ತಂದಿದೆ. ಆದರೆ ರಾಜ್ಯದಲ್ಲಿ ಅತ್ಯಾಚಾರ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಕೃಪಾ ಆಳ್ವ ಇದ್ದರು.