ಪ್ರಚಾರ ಖರ್ಚಿಗೆ ಅಧ್ಯಕ್ಷರಿಗೆ ಎಡತಾಕುವ ಅಭ್ಯರ್ಥಿಗಳು!
ಮಂಗಳೂರು: ಮತದಾನ ಮುಗಿಯುವ ಮುನ್ನವೇ ಅಭ್ಯರ್ಥಿಗಳು ಪ್ರಚಾರಕ್ಕೆ ಪಕ್ಷದವರು ಹಣ ಸಿಗದ ಬಗ್ಗೆ ಗಲಾಟೆ ಮಾಡುತ್ತಿದ್ದಾರೆ. ಸ್ಥಳೀಯ ಆಡಳಿತ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಗೆಲವಿನ ಬಗ್ಗೆ ತಲೆಬಿಸಿ ಮಾಡುತ್ತಿದ್ದರೆ ಮಂಗಳೂರು ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಮೂವರು ಅಭ್ಯರ್ಥಿಗಳು ಜಿಲ್ಲಾ ಅಧ್ಯಕ್ಷರು ಪ್ರಚಾರಕ್ಕೆ ಹಣ ನೀಡಿಲ್ಲ ಎಂದು ಆರೋಪಿಸಿ ಅಧ್ಯಕ್ಷರ ಮನೆಗೆ ಎಡತಾಕುತ್ತಿದ್ದಾರೆ.
ಜಿಲ್ಲಾಧ್ಯಕ್ಷ ಅಲೆಕ್ಕಾಡಿ ಗಿರೀಶ್ ರೈ ಮನೆಗೆ ಆಗಮಿಸಿದ ಮೂವರು ಮಹಿಳಾ ಅಭ್ಯರ್ಥಿಗಳು ಬೀಗ ಹಾಕಿರುವುದನ್ನು ನೋಡಿ ವಾಪಸ್ ಆಗಿದ್ದಾರೆ. ಪ್ರಚಾರ ಸಂದರ್ಭದಲ್ಲಿ ಬಳ್ಳಾರಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಪ್ರಚಾರ ಪತ್ರಗಳು ಮತ್ತು ಹಣ ಬರಲಿದೆ ಎಂದು ಹೇಳಿದ್ದರು. ಅದಕ್ಕಾಗಿ ನಾವು 70 ಸಾವಿರ ಖರ್ಚು ಮಾಡಿದ್ದೇವೆ. ಚುನಾವಣೆ ದಿನ ಬಂದರೂ ಪ್ರಚಾರದ ಹಣ ನೀಡಿಲ್ಲ ಎಂದು ವೆಲೆನ್ಸಿಯ ವಾರ್ಡ್ನಿಂದ ಸ್ಪರ್ಧಿಸುತ್ತಿರುವ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಫ್ಲೋಸಿಯ ಆರೋಪಿಸುತ್ತಾರೆ. ಈಗ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಮುಖತಃ ಭೇಟಿಗೂ ಸಿಗುತ್ತಿಲ್ಲ ಎಂಬುದು ಇವರ ಅಳಲು.
ರು 70 ಸಾವಿರ ಸಾಲ ಪಡೆದಿದ್ದೇನೆ. ಈಗ ನನಗೆ ದಿಕ್ಕೇ ತೋಚದಂತೆ ಆಗಿದೆ. ನಾವು ಪ್ರಚಾರಕ್ಕೆ ಹೋಗಬೇಕು. ಆದರೆ ಹಣ ಸಿಗದ ಕಾರಣ ಒಂದು ವಾರದಿಂದ ಹಣಕ್ಕಾಗಿ ಅಧ್ಯಕ್ಷರ ಮನೆಗೆ ಅಲೆಯುತ್ತಿದ್ದೇವೆ. ಅವರು ಮನೆಯಲ್ಲಿಯೇ ಇಲ್ಲ ಎನ್ನುತ್ತಾರೆ ಫ್ಲೋಸಿಯಾ.
ಕೊನೆಗೆ ಮೊಬೈಲ್ ಮೂಲಕ ಎಚ್ಚರಿಕೆ ಎಸ್ಎಂಎಸ್ ಕಳುಹಿಸಿದೆವು. 'ನೀವು ಇದೇ ರೀತಿ ಮುಂದವರಿದರೆ ಮಾಧ್ಯಮ ಬಳಿ ತೆರಳುತ್ತೇನೆ' ಎಂದು ಎಚ್ಚರಿಕೆ ನೀಡಿದಾಗ ಸ್ವಲ್ಪ ಮೆತ್ತಗಾದರು. 'ಬಳ್ಳಾರಿಗೆ ಕರೆದುಕೊಂಡು ಹೋಗಿ ಶ್ರೀರಾಮುಲು ಅವರನ್ನು ಭೇಟಿ ಮಾಡಿಸುತ್ತೇವೆ. ಮತದಾನ ಬಳಿಕ ಹಣ ಪಾವತಿಸುತ್ತೇನೆ' ಎಂದು ಹೇಳಿದರು. ಆದರೆ ಅವರ ಮಾತನ್ನು ನಂಬುವಂತಿಲ್ಲ ಎನ್ನುತ್ತಾರೆ ಅಭ್ಯರ್ಥಿಗಳು!
ಮರೋಳಿ ವಾರ್ಡ್ ಅಭ್ಯರ್ಥಿ ಐರಿನ್ ಡಿಸಿಲ್ವ ಆರೋಪ ಕೂಡಾ ಇದೆ. 'ನಾನು ದುಡಿದು ಒಟ್ಟು ಮಾಡಿಟ್ಟ ಹಣ 50 ಸಾವಿರ ಖರ್ಚು ಮಾಡಿದ್ದೇನೆ. ಮಗನ ಸಂಬಳದ ಹಣ ಕೂಡಾ ಪಡೆದಿದ್ದೇನೆ. ಹೇಗಾದರೂ ಮಾಡಿ ನನ್ನ ದುಡಿದ ಹಣ ನನಗೆ ವಾಪಸ್ ಸಿಗಲಿ' ಎಂದು ಐರಿನ್ ಅಲವತ್ತುಕೊಂಡಿದ್ದಾರೆ. ಬಳ್ಳಾರಿಯಿಂದ ಪ್ರಚಾರ ಸಾಮಗ್ರಿ ಬರುತ್ತದೆ ಎಂದು ಹೇಳಿದ್ದರು. ಅದೂ ಚುನಾವಣೆ ಮುಗಿಯುವವರೆಗೆ ಬಂದಿಲ್ಲ ಎನ್ನುತ್ತಾರೆ.
ಹಣ ಇದೆ ಎನ್ನುವುದು ತಪ್ಪುಅಭಿಪ್ರಾಯ
ಆದರೆ ಗಿರೀಶ್ ರೈ ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. 'ಬಿಎಸ್ಆರ್ ಕಾಂಗ್ರೆಸ್ ಪಕ್ಷ ಗಣಿ ರೆಡ್ಡಿಗಳ ಬೆಂಬಲ ಇದೆ ಎಂಬ ಕಾರಣಕ್ಕೆ ತುಂಬಾ ಹಣ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ವಾಸ್ತವ ಎಂದರೆ ಜಿಲ್ಲಾ ಬಿಎಸ್ಆರ್ ಕಾಂಗ್ರೆಸ್ ಕಚೇರಿಗೆ ಇದುವರೆಗೆ ಪಕ್ಷದ ವತಿಯಿಂದ ನಯಾ ಪೈಸೆ ಬಂದಿಲ್ಲ. ಶ್ರೀರಾಮುಲು ಕೂಡಾ ಹಣ ನೀಡಿಲ್ಲ. ಇಲ್ಲಿ ನಾನು ನನ್ನ ಸ್ವಂತ ಹಣದಿಂದ ಪಕ್ಷದ ಕಚೇರಿ ಶುರು ಮಾಡಿದ್ದೇನೆ. ತತ್ವ ಆದರ್ಶ ಉಳ್ಳ ಪಕ್ಷ ನಮ್ಮದು' ಎನ್ನುತ್ತಾರೆ.
'ಹಣ ಬರಬಹುದು ಎಂಬ ಆಕಾಂಕ್ಷೆ ಇಟ್ಟುಕೊಂಡಿದ್ದರು. ಆದರೆ ಹಣ ಸಿಗದೆ ಇದ್ದಾರೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಎಲ್ಲಿಯೂ ಕಾಣೆಯಾಗಿಲ್ಲ. ನಾನು ನಗರದಲ್ಲಿಯೇ ಇದ್ದೇನೆ, ಆದರೆ ಕೆಲಸ ದಿನಗಳು ಮಾತ್ರ ಹೊರಗಡೆ ಇದ್ದೆ. ನನಗೆ ಯಾರ ಕಣ್ಣುತಪ್ಪಿಸಿ ಹೋಗುವ ಅವಶ್ಯಕತೆ ಇಲ್ಲ' ಎನ್ನುತ್ತಾರೆ ರೈ.
ಪಕ್ಷದ ಒಂದು ಬಣ ಅಧ್ಯಕ್ಷರಿಗೆ ಹಣ ಬಂದಿದೆ ಎಂದು ಅಭ್ಯರ್ಥಿಗಳ ಬಳಿ ಸುಳ್ಳು ಹೇಳಿ ಎತ್ತಿಕಟ್ಟಿದ್ದಾರೆ. ಹೀಗಾಗಿ ಹಣ ಕೇಳುತ್ತಿದ್ದಾರೆ. 'ಹಣದಿಂದ ಮನಪರಿವರ್ತನೆ ಮಾಡುವುದು ಬೇಡ, ಮನವರಿಕೆ ಮಾಡಿ ಜನರನ್ನು ಗೆಲ್ಲುವ. ಹಣ ನೀಡುವ ವ್ಯವಸ್ಥೆ ಇಲ್ಲ' ಎಂದು ಶ್ರೀರಾಮುಲು ಹೇಳಿದ್ದಾರೆ ಎನ್ನುತ್ತಾರೆ ರೈ.