ಬಂಟ್ವಾಳ: ಮಾತಿನ ಚಕಮಕಿ
ಬಂಟ್ವಾಳ: ರಾಜಕೀಯ ಪಕ್ಷಗಳ ಆರೋಪ- ಪ್ರತ್ಯಾರೋಪ- ಮಾತಿನ ಚಕಮಕಿಯ ನಡುವೆ ಬಂಟ್ವಾಳ ಪುರಸಭೆಯ 23 ವಾರ್ಡ್ಗಳಿಗೆ ಗುರುವಾರ ಮತದಾನ ನಡೆದಿದೆ.
ಕೈಕೊಟ್ಟ ಮತಯಂತ್ರ: ವಾಡರ್ ಸಂಖ್ಯೆ 11ರ ಕಾರ್ಮೆಲ್ ಕಾನ್ವೆಂಟ್ ಮತಗಟ್ಟೆಯಲ್ಲಿ ಎಲೆಕ್ಟ್ರೋನಿಕ್ ಮತಯಂತ್ರ ಕೈಕೊಟ್ಟ ಪರಿಣಾಮ ಬೇಗನೆ ಮತಚಲಾಯಿಸಲು ಕೇಂದ್ರಕ್ಕೆ ಬಂದಿದ್ದ ಮತದಾರರು ತೊಂದರೆ ಪಡುವಂತಾಯಿತು. ನಂತರ ಚುನಾವಣಾಧಿಕಾರಿಯವರು ಸ್ಥಳಕ್ಕೆ ಧಾವಿಸಿ ಸಮಸ್ಯೆ ಪರಿಹರಿಸಿದ ಬಳಿಕ ಮತದಾನ ಮುಂದುವರಿಯಿತು.
ಅಲ್ಲಲ್ಲಿ ಹೈ- ಕೈ: ಮತದಾರರ ಮನವೊಲಿಕೆಯ ಭರದಲ್ಲಿ ಕೆಲವೆಡೆ ಪಕ್ಷಗಳ ಕಾರ್ಯಕರ್ತರ ನಡುವೆ ಪರಸ್ಪರ ಹೈ- ಕೈ, ಮಾತಿನ ಚಕಮಕಿ ನಡೆದ ಬಗ್ಗೆ ವರದಿಯಾಗಿದೆ. ಕೊಡಂಗೆ ಮತಗಟ್ಟೆಯಲ್ಲಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ಹತೋಟಿಗೆ ಬಂತು. ಕೈಕುಂಜೆ ಹಾಗೂ ಪಲ್ಲಮಜಲು, ಗೂಡಿನಬಳಿ, ಬಂಟ್ವಾಳದ ಮತಗಟ್ಟೆಗಳಲ್ಲಿ ಕಾರ್ಯಕರ್ತರ ಮಾತಿನ ಚಕಮಕಿ ನಡೆದಿದೆ.
ನಾಯಕರ ಭೇಟಿ: ಎಲ್ಲಾ 23 ಮತಕೇಂದ್ರಗಳ ಬಳಿಯ ಬೂತ್ಗಳಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಶಾಸಕ ರಮಾನಾಥ ರೈ, ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ ಮತಕೇಂದ್ರಗಳಿಗೆ ಭೇಟಿ ನೀಡಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು. ವಿವಿಧ ಪಕ್ಷ ನಾಯಕರೂ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳನ್ನು ಭೇಟಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಫ್ಯಾನ್ ತೆರವು: ಬಿಎಸ್ಆರ್ ಪಕ್ಷದ ಚಿಹ್ನೆ ಸೀಲಿಂಗ್ ಫ್ಯಾನ್. ಹಾಗಾಗಿ ಪುರಸಭೆಯಲ್ಲಿ ಬಿಎಸ್ಆರ್ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇಲ್ಲದೇ ಇದ್ದರೂ ಕೆಲವು ಮತೆಗಟ್ಟೆಗಳಲ್ಲಿ ಸೀಲಿಂಗ್ ಫ್ಯಾನ್ಗಳನ್ನು ಅಧಿಕಾರಿಗಳು ಬುಧವಾರವೇ ತೆರವುಗೊಳಿಸಿದ್ದರು. ಫ್ಯಾನ್ ಇಲ್ಲದ ಹಿನ್ನಲೆಯಲ್ಲಿ ಮತಕೇಂದ್ರದ ಅಧಿಕಾರಿಗಳು ವಿಪರೀತ ಸೆಕೆಯಿಂದ ಬಳಲುವಂತಾಯಿತು.