ಮಗು ಅಪಹರಣ ಯತ್ನ; ವ್ಯಕ್ತಿಗೆ ಒದೆ
ಉಪ್ಪಿನಂಗಡಿ: ತಾಯಿಯ ಕೈಯಲ್ಲಿದ್ದ ಒಂದು ವರ್ಷದ ಮಗುವೊಂದನ್ನು ಅಪಹರಿಸಲು ಯತ್ನಿಸಿದ ವ್ಯಕ್ತಿಯೊಬ್ಬನಿಗೆ ಸಾರ್ವಜನಿಕರು ಗೂಸಾ ನೀಡಿದ ಘಟನೆ ಉಪ್ಪಿನಂಗಡಿಯಲ್ಲಿ ಗುರುವಾರ ನಡೆದಿದೆ.
ಪೆರಿಯಡ್ಕ ಮನೆ ನಿವಾಸಿ ಅಬ್ದುಲ್ ಹಮೀದ್ ಎಂಬವರ ಪತ್ನಿ ತಮ್ಮ ಒಂದು ವರ್ಷದ ಮಗು ಸಜಿನಾಳೊಂದಿಗೆ ಉಪ್ಪಿನಂಗಡಿ ಅಂಚೆ ಕಚೇರಿ ಬಳಿ ನಿಂತಿದ್ದರು. ಆ ವೇಳೆ ಅಂಚೆ ಕಚೇರಿಗೆ ಬಂದ ಮೂಲತಃ ಶಿವಮೊಗ್ಗ ಜಿಲ್ಲೆಯ ರಾಗಿಗುಡ್ಡೆ ನಿವಾಸಿಯಾದ ಸುನಿಲ್ ಅಲಿಯಾಸ್ ಭವಾನಿ ಶಂಕರ್ ಎಂಬಾತ ಮಗುವನ್ನು ಮುದ್ದಿಸುವಂತೆ ವರ್ತಿಸುತ್ತಿದ್ದ. ಮಗುವಿನ ಮೇಲಿನ ಮಮಕಾರ ಸಹಜವೆಂದು ಅರಿತ ಮಹಿಳೆ ಮೌನವಾಗಿದ್ದಂತೆಯೇ ಮಗುವನ್ನು ಆಕೆಯ ಕೈಯಿಂದ ಆತ್ಮೀಯತೆಯಲ್ಲೇ ತೆಗೆದುಕೊಂಡ ಆತ ಮಗುವನ್ನು ಮುದ್ದಿಸುತ್ತ ಮುಂದೆ ಸಾಗಿದ. ಅಪರಿಚಿತ ವ್ಯಕ್ತಿ ಮಗುವನ್ನು ಎತ್ತಿಕೊಂಡು ಹೋಗುತ್ತಿರುವುದನ್ನು ಕಂಡ ಭೀತಿಗೊಂಡ ಮಹಿಳೆ ಜೋರಾಗಿ ಕೂಗಿದರು. ಕೂಡಲೇ ಅಲ್ಲಿಗೆ ಬಂದ ಜನತೆ ವಿಚಾರ ತಿಳಿದು, ಮಗುವಿನೊಂದಿಗೆ ಹೋದ ವ್ಯಕ್ತಿಯ ಶೋಧ ನಡೆಸಿದಾಗ ಆತ ಉಪ್ಪಿನಂಗಡಿ ಹಳೆ ಬಸ್ ನಿಲ್ದಾಣ ಬಳಿಯ ಅಂಗಡಿಯೊಂದರಲ್ಲಿ ಮಗುವಿಗೆ ಚಾಕಲೇಟ್ ತೆಗೆದುಕೊಳ್ಳುತ್ತಿದ್ದುದು ಕಂಡುಬಂತು. ಆಕ್ರೋಶಿತ ನಾಗರಿಕರು ಮಗುವನ್ನು ತೆಗೆದುಕೊಂಡು ಆತನಿಗೆ ಥಳಿಸಿದರು.