ಸುಳ್ಯ; ರಾಜಕೀಯ ಸಂಘರ್ಷ
ಸುಳ್ಯ: ಸುಳ್ಯ ನ.ಪಂ.ನ ನೂತನ ಸಾರಥಿಗಳ ಆಯ್ಕೆಗೆ ಗುರುವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಶೇ.80 ಮತದಾನವಾಗಿದೆ. ಸುಳ್ಯ ನ.ಪಂ.ನ 18 ವಾರ್ಡ್ಳಿಗೆ ಚುನಾವಣೆ ನಡೆದಿದ್ದು, 18 ಮತದಾನ ಕೇಂದ್ರಗಳಲ್ಲೂ ಬೆಳಗ್ಗಿನಿಂದಲೇ ಮತದಾರರು ಸರತಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವುದು ಕಂಡು ಬಂತು.
ಶಾಂತಿನಗರದಲ್ಲಿ ಅಶಾಂತಿ: ಶಾಂತಿನಗರ ವಾರ್ಡ್ನಲ್ಲಿ ನಕಲಿ ಮತದಾನ ಮಾಡಲು ಬಂದ ಅರಂತೋಡಿನ ಬಿಳಿಯಾರು ಎಂಬಲ್ಲಿನ ಯುವಕನನ್ನು ಬಿಜೆಪಿ ಕಾರ್ಯಕರ್ತರ ಸೂಚನೆಯ ಮೇರೆಗೆ ಚುನಾವಣಾಧಿಕಾರಿಗಳು ಪೊಲೀಸರಿಗೊಪ್ಪಿಸಿದರು. ಬಿಳಿಯಾರಿನ ಅಬ್ದುಲ್ ರಹಿಮಾನ್ ಎಂಬಾತ ಇರ್ಫಾನ್ ಎಂಬವರ ಮತ ಚಲಾಯಿಸಲು ಬಂದಾಗ ಈ ಘಟನೆ ಸಂಭವಿಸಿತು. ಸ್ಥಳದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನೂರಾರು ಕಾರ್ಯಕರ್ತರು ಜಮಾಯಿಸಿ ಉದ್ವಿಗ್ನ ಸ್ಥಿತಿ ನೆಲೆಸಿತು.
ಮೂವರು ಬಿದ್ದು ಗಾಯ: ಸ್ನೇಹ ಶಾಲೆಯ ಮತದಾನ ಕೇಂದ್ರದ ಬಳಿ ಪೊಲೀಸರು ಲಾಠಿ ಬೀಸಿದ ವೇಳೆ ಓಡುವಾಗ ಬಿದ್ದು ಮೂವರು ಗಾಯಗೊಂಡ ಘಟನೆ ನಡೆಯಿತು. ಮತದಾನ ಕೇಂದ್ರದ ಬಳಿ ಹೆಚ್ಚು ಕಾರ್ಯಕರ್ತರು ಜಮಾಯಿಸಿ ಪರಿಧಿ ಒಳಗೆ ಬರುತ್ತಿದ್ದುದನ್ನು ಕಂಡ ಗೃಹ ರಕ್ಷಕ ದಳದ ಸಿಬ್ಬಂದಿ ಅವರನ್ನು ದೂರ ಹೋಗುವಂತೆ ಹೇಳಿ ಲಾಠಿ ಬೀಸಿದರು.
ಅದು ತಮ್ಮ ಕಾರ್ಯಕರ್ತನಿಗೆ ತಾಗಿತೆಂದು ಕೆರಳಿದ ಬಿಜೆಪಿ ಕಾರ್ಯಕರ್ತರು ಮತ್ತಷ್ಟು ಸಂಖ್ಯೆಯಲ್ಲಿ ಸೇರಿದಾಗ ಪೊಲೀಸರು ಮತ್ತೆ ಲಾಠಿ ಬೀಸಿದರು. ಎಲ್ಲ ಪಕ್ಷಗಳ ಕಾರ್ಯಕರ್ತರು ಓಟಕ್ಕಿತ್ತರು. ಈ ಸಂದರ್ಭ ಬಿಜೆಪಿ ಕಾರ್ಯಕರ್ತರಾದ ತಿರುಮಲೇಶ್ವರ, ಗುಡ್ಡಪ್ಪ ನಾಯ್ಕ ಗಾಯಗೊಂಡರು. ಸ್ಥಳಕ್ಕೆ ಶಾಸಕ ಅಂಗಾರ, ಕೆ.ಎಫ್.ಡಿಸಿ. ಅಧ್ಯಕ್ಷ ಎಸ್.ಎನ್.ಮನ್ಮಥ ಭೇಟಿ ನೀಡಿ ಪೊಲೀಸರೊಂದಿಗೆ ಮಾತುಕತೆ ನಡೆಸಿದರು. ಅಪರಾಹ್ನ ತುಂತುರು ಮಳೆ ಮತದಾನದ ಉತ್ಸಾಹಕ್ಕೆ ಅಡ್ಡಿಯಾಯಿತು.