'ಆಪರೇಷನ್ ಅಧ್ಯಾತ್ಮ' ಶುರುವಾಗಿದೆ; ಬೊಳುವಾರು ಮಹಮ್ಮದ್ ಕುಂಞ
ಮಂಗಳೂರು: ಆಪರೇಷನ್ ಕಮಲ ಇದ್ದಂತೆ 'ಆಪರೇಷನ್ ಅಧ್ಯಾತ್ಮ' ಶುರುವಾಗಿದೆ. ಅಧ್ಯಾತ್ಮದ ಹೆಸರಲ್ಲಿ ಎಲ್ಲವೂ ನಡೆಯುತ್ತಿದ್ದು, ಇದು ಸಮಾಜದ ಗಂಭೀರ ಸಮಸ್ಯೆಯಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಬೊಳುವಾರು ಮಹಮ್ಮದ್ ಕುಂಞ ಹೇಳಿದ್ದಾರೆ.
ನಗರದ ರವೀಂದ್ರ ಕಲಾಭವನದಲ್ಲಿ ಶನಿವಾರ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ 9ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಭೂತಗಳೆಲ್ಲ ಬ್ರಾಹ್ಮಣರಾಗಲು ಹೊರಟಿದೆ ಎನ್ನುವ ಮೂಲಕ ಎಲ್ಲರೂ ಮೇಲ್ಜಾತಿಯವರಾಗಲು ಪ್ರಯತ್ನಿಸುತ್ತಿದ್ದಾರೆ ಎಂದ ಅವರು, ಮಹಿಳಾ ಸಬಲೀಕರಣದಲ್ಲಿ ಅದರ ಮೊದಲ ಶತ್ರು ಧರ್ಮ ಗ್ರಂಥಗಳು, ಇದನ್ನು ಬರೆದದ್ದು ಗಂಡಸರಿಗಾಗಿ ಎಂದರು. ನಮ್ಮಲ್ಲಿ ಮನೆಯೊಳಗೆ ಸರಿ ಇಲ್ಲದಾಗ ಹೊರಗೆ ಸಬಲೀಕರಣದ ಬಗ್ಗೆ ಮಾತನಾಡುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.
ಬುರ್ಖಾ ಕಡ್ಡಾಯವಲ್ಲ: ಬುರ್ಖಾ ಮುಸ್ಲಿಮರಿಗೆ ಕಡ್ಡಾಯವಲ್ಲ. ಬುರ್ಖಾ ಹಾಕಿ ಶಾಲೆಗೆ ಬರುವವರನ್ನು ಪ್ರೀತಿಯಿಂದ ನೋಡಿ ಎಂದು ಕರೆ ನೀಡಿದ ಬೊಳುವಾರು, ಮಂಗಳೂರಿನಲ್ಲಿ ನೈತಿಕಗಿರಿ ಜಾಸ್ತಿಯಾಗಿದ್ದು, ಅಂಥ ಶಿಕ್ಷಣ ಸಂಸ್ಥೆಗಳನ್ನು ಯಾರೂ ಪ್ರಶ್ನಿಸುತ್ತಿಲ್ಲ ಎಂದರು. ಕೋರ್ಟ್, ಕೇಸ್ ಎಂದು ಶೈಕ್ಷಣಿಕ ಜೀವನನ್ನು ಹಾಳು ಮಾಡದಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಅಪ್ಪ-ಅಮ್ಮ ಇರುವವರೆಗೆ ಸಮಾಜದಲ್ಲಿ ಜಾತಿಯನ್ನು ತೊಡೆದುಹಾಕಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ಇದು ವಿಲಕ್ಷಣವಾದರೂ ಸತ್ಯ. ತಂದೆ ತಾಯಿಯರೇ ಮಕ್ಕಳಿಗೆ ಜಾತಿಯ ಬೀಜ ಬಿತ್ತುತ್ತಾರೆ. ಅಂಥವರಿಗೆ ತಮ್ಮ ಹಿಂದಿನ ತಲೆಮಾರಿನ ಜಾತಿ ಗೊತ್ತಿದೆಯೇ ಎಂದು ಪ್ರಶ್ನಿಸಿದರು.
ಸಾಹಿತಿಗಳನ್ನೂ ತರಾಟೆಗೆ ತೆಗೆದುಕೊಂಡ ಬೊಳುವಾರು, ಪ್ರಶಸ್ತಿಗಾಗಿ ಬರೆಯದವರು ತಮ್ಮ ಹೆಸರು ಹಾಕುವುದಿಲ್ಲ. ಹೆಸರು ಹಾಕಿಕೊಂಡು ಪ್ರಶಸ್ತಿಗಾಗಿ ಬರೆದಿಲ್ಲ ಎನ್ನುವುದು ಸುಳ್ಳು ಎಂದರು.
ಮಂಗಳೂರು ವಿವಿ ಪ್ರಾಧ್ಯಾಪಕ, ಜಾನಪದ ವಿದ್ವಾಂಸ ಪ್ರೊ.ಕೆ.ಚೆನ್ನಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ. ಎಚ್. ಆರ್. ಲಕ್ಷ್ಮೀನಾರಾಯಣ ಭಟ್ಟ, ಸಂಘಟಕರಾದ ಸಿಬಂತಿ ಪದ್ಮನಾಭ, ರಾಜೇಶ್ ಪದ್ಮಾರ್ ಹಾಜರಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.