ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮತ್ತೆ ತಾಳ ತಪ್ಪಿದ ಸಂಗೀತ, ನೃತ್ಯ ಪರೀಕ್ಷೆ

Mainashree
Updated On : 9 Mar 2013, 11:50 am

ಈ ಬಾರಿಯೂ ಮೂಲಸೌಕರ್ಯ, ಸಿಬ್ಬಂದಿ ಕೊರತೆ ನೆಪ  11 ಸಾವಿರ ವಿದ್ಯಾರ್ಥಿಗಳು ಅತಂತ್ರ
- ಆತ್ಮಭೂಷಣ್
ಮಂಗಳೂರು:
ಯಾಕೋ ಏನೋ ಸಂಗೀತ, ನೃತ್ಯ, ತಾಳವಾದ್ಯಕ್ಕೂ, ರಾಜ್ಯ ಸರ್ಕಾರಕ್ಕೂ ಕಳೆದ ವರ್ಷದಿಂದ ತಾಳಮೇಳ ಸರಿಹೊಂದುತ್ತಿಲ್ಲ. ಕಳೆದ ಬಾರಿ ಮೈಸೂರಿನ ಸಂಗೀತ ವಿಶ್ವವಿದ್ಯಾಲಯ ಪರೀಕ್ಷೆ ನಡೆಸುವುದಿಲ್ಲ ಎಂದು ಪಟ್ಟು ಹಿಡಿದು ಕೂತಾಗ ವಿದ್ಯಾರ್ಥಿಗಳ ನೆರವಿಗೆ ಬಂದದ್ದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ. ಮತ್ತೆ ಈ ಬಾರಿಯೂ ಸಂಗೀತ ವಿವಿ ಪರೀಕ್ಷೆ ನಡೆಸುವುದಿಲ್ಲ ಎಂದು ಕ್ಯಾತೆ ತೆಗೆದಿದ್ದು, ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಯ ವಿದ್ಯಾರ್ಥಿಗಳು ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ.
 ಕಳೆದ ವರ್ಷ ಫೆ.8ರಂದು ಮೈಸೂರಿನಲ್ಲಿರುವ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿವಿ (ಸಂಗೀತ ವಿವಿ)ಗೆ ಪರೀಕ್ಷೆ ನಡೆಸುವ ಹೊಣೆಗಾರಿಕೆಯನ್ನು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹಸ್ತಾಂತರಿಸಿತ್ತು. ಮೂಲ ಸೌಕರ್ಯ, ಸಿಬ್ಬಂದಿ ಕೊರತೆ ನೆಪವೊಡ್ಡಿ ತಕ್ಷಣಕ್ಕೆ ಸಾಧ್ಯವಿಲ್ಲ ಎಂದು ವಿವಿ ಪರೀಕ್ಷೆ ನಡೆಸುವುದನ್ನು ತಳ್ಳಿಹಾಕಿತ್ತು. ಹಾಗಾಗಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯೇ ಪ್ರತಿ ವರ್ಷ ಮೇನಲ್ಲಿ ನಡೆಸುವ ಪರೀಕ್ಷೆಯನ್ನು ವಿಳಂಬವಾಗಿ ಅಕ್ಟೋಬರ್ನಲ್ಲಿ ನಡೆಸಿತ್ತು. 2013ರ ಸಾಲಿನ ಪರೀಕ್ಷೆಯನ್ನು ಸಂಗೀತ ವಿವಿಯೇ ನಡೆಸುವಂತೆ ಶಿಕ್ಷಣ ಇಲಾಖಾ ಪ್ರಧಾನ ಕಾರ್ಯದರ್ಶಿ ನಿರ್ದೇಶಿಸಿದ್ದರು.
ಮತ್ತೆ ಸಂಗೀತ ವಿವಿ ಕ್ಯಾತೆ: ಸಂಗೀತ, ನೃತ್ಯ, ಪ್ರದರ್ಶಕ ಕಲೆಗಳಿಗೆಂದೇ ಸ್ಥಾಪನೆಯಾದ ಸಂಗೀತ ವಿವಿ ನಂತರ ಮೂಲಸೌಕರ್ಯ ವೃದ್ಧಿಗೆ ಏನೂ ಉತ್ಸಾಹ ತೋರಿಸಿಲ್ಲ. ಇದೇ ಕಾರಣ ಮುಂದಿಟ್ಟು ಈ ವರ್ಷವೂ ತಾನೂ ಸಂಗೀತ ಪರೀಕ್ಷೆ ನಡೆಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ತನ್ನಲ್ಲಿ ಮೂಲಸೌಕರ್ಯ ಇಲ್ಲ, ಸಿಬ್ಬಂದಿಯೂ ಸರಿಯಾಗಿಲ್ಲ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಸಂಗೀತ, ನೃತ್ಯ ಪರೀಕ್ಷೆ ಮಾಡುವುದಿಲ್ಲ, ಸಂಗೀತ ವಿವಿ ಇರುವುದು ವಿವಿಧ ಸಂಗೀತ ಕೋರ್ಸ್, ಸಂಶೋಧನೆ, ಪುಸ್ತಕಗಳನ್ನು ಪ್ರಕಟಿಸುವುದಕ್ಕೆ ಮಾತ್ರ ಎಂದು ವಿವಿ ಕುಲಪತಿ ಹನುಮಣ್ಣ ನಾಯಕ ದೊರೆ ಶನಿವಾರ 'ಕನ್ನಡಪ್ರಭ'ಕ್ಕೆ ಸ್ಪಷ್ಟಪಡಿಸಿದ್ದಾರೆ. ಹಾಗಾದರೆ ಪರೀಕ್ಷೆ ನಡೆಸುವುದಾಗಿ ಸಂಬಂಧಪಟ್ಟ ಕಡತಗಳನ್ನು ವಿವಿ ವಶಕ್ಕೆ ತೆಗೆದುಕೊಂಡಿದ್ದೇಕೆ ಎನ್ನುವ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ.
ರಾಜ್ಯದಲ್ಲಿ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಗೆ ಹಾಜರಾಗುವ ಸುಮಾರು 11 ಸಾವಿರ ವಿದ್ಯಾರ್ಥಿಗಳಿದ್ದಾರೆ. ಈವರೆಗೆ 42 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿತ್ತು. ಕಳೆದ ವರ್ಷದ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಪರೀಕ್ಷೆ ಫಲಿತಾಂಶ ಈಚೆಗೆ ಪ್ರಕಟವಾಗಿತ್ತು.
ಕಳೆದ ವರ್ಷ ಶಿಕ್ಷಣ ಇಲಾಖಾ ಪ್ರಧಾನ ಕಾರ್ಯದರ್ಶಿ ಸೂಚನೆ ಮೇರೆಗೆ ಸಂಗೀತ ಪರೀಕ್ಷೆ ನಡೆಸಲಾಗಿದೆ. ಈ ವರ್ಷ ಏನು ಮಾಡಬೇಕೆಂಬ ಬಗ್ಗೆ ಅವರಿಗೆ ಪತ್ರ ಬರೆಯಲಾಗಿದೆ. ಒಪ್ಪಿಗೆ ನೀಡಿದರೆ ಜೂನ್ ಅಥವಾ ಜುಲೈನಲ್ಲಿ ಪರೀಕ್ಷೆ ನಡೆಸಬೇಕಷ್ಟೆ ಎನ್ನುತ್ತಾರೆ ಇಲಾಖಾ ನಿರ್ದೇಶಕ ಹನುಮಂತರಾಯಪ್ಪ.
ಕಳೆದ ಬಾರಿಯ ಸಂಗೀತ, ನೃತ್ಯ ಪರೀಕ್ಷೆಯನ್ನು ಅನಿವಾರ್ಯವಾಗಿ ಮಾಡಿದ್ದೇವೆ. ಇನ್ನು ಸಂಗೀತ ವಿವಿ ಮುಂದುವರಿಸಬೇಕು. ಎಲ್ಲವನ್ನೂ ಸಂಗೀತ ವಿವಿಗೆ ಹಸ್ತಾಂತರಿಸಲಾಗಿದೆ.
- ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ
ಸಂಗೀತ, ನೃತ್ಯ ಪರೀಕ್ಷೆಯನ್ನು ಈ ಬಾರಿ ಯಾರು ನಡೆಸಬೇಕು ಎಂಬ ಬಗೆಗಿನ ಕಡತ ನನ್ನ ಇಲಾಖೆಯಲ್ಲಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
- ಸಿ.ಟಿ. ರವಿ, ಉನ್ನತ ಶಿಕ್ಷಣ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement