ರೈತರಿಗೆ ಸಹಾಯಧನ
ವಿಶೇಷ ವರದಿ
ಮೈಸೂರು: ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ರೈತರು ಮತ್ತು ಉದ್ದಿಮೆದಾರರಿಗೆ ಸಹಾಯಧನ ದೊರೆಯಲಿದೆ.
ಕೇಂದ್ರ ಪುರಸ್ಕೃತ ರಾಷ್ಟ್ರೀಯ ತೋಟಗಾರಿಕೆ ಮಿಷನ್ (ಎನ್ಎಚ್ಎಂ) 2005- 06ನೇ ಸಾಲಿನಿಂದ ಜಾರಿಯಲ್ಲಿದೆ. ಈ ಯೋಜನೆಯಡಿ ವಿವಿಧ ತೋಟಗಾರಿಕೆ ಉತ್ಪನ್ನಗಳು ಕ್ಷೇತ್ರ ಮಟ್ಟದಲ್ಲಿ ಕಟಾವಿನ ನಂತರ ಮಾರಾಟ ಮಾಡುವವರೆಗೆ ಹಾಳಾಗದಂತೆ ಸಂರಕ್ಷಿಸಲು ಖಾಸಗಿ ವಲಯದಲ್ಲಿ ರೈತರು ಮತ್ತು ಉದ್ದಿಮೆದಾರರಿಗೆ ಈ ಸೌಲಭ್ಯ ಸಿಗಲಿದೆ.
ಶೀಥಲಗೃಹ ನಿರ್ಮಾಣ, ಶೀಥಲ ವಾಹನ ಖರೀದಿ, ಹಣ್ಣು ಮಾಗಿಸುವ ಘಟಕ, ಗ್ರಾಮ ಪಂಚಾಯ್ತಿಗಳು, ಪುರಸಭೆಗಳು, ನಗರಪಾಲಿಕೆಗಳು ಅಥವಾ ಖಾಸಗಿ ಉದ್ದಿಮೆದಾರರು ಮಾರುಕಟ್ಟೆ ನಿರ್ಮಿಸಲು, ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆಗೆ ಪ್ರಾಥಮಿಕ ಸಂಸ್ಕರಣಾ ಘಟಕ ಆರಂಭಿಸಲು ಮೂಲ ಸೌಕರ್ಯ ವೆಚ್ಚದ ಮೇಲೆ ಶೇ. 25ರಿಂದ 40 ರಷ್ಟು ಸಹಾಯಧನ ದೊರೆಯುತ್ತದೆ.
ಈ ಸಹಾಯಧನ ಪಡೆಯಲು ರೈತರು, ಉದ್ದಿಮೆದಾರರು ದೀರ್ಘಾವಧಿ ಸಾಲ ಪಡೆಯಬೇಕು. ಸಾಲ ಮಂಜೂರಾದ ಕೂಡಲೇ ಬ್ಯಾಂಕಿನ ಮಂಜೂರಾತಿ ಪತ್ರ, ಸಾಲ ವರದಿ ಮತ್ತು ಯೋಜನಾ ಪ್ರಸ್ತಾವನೆ ಕಳುಹಿಸಿಕೊಡಬೇಕು. ಈ ಸಹಾಯಧನದ ಲಾಭ ರೈತರಿಗೆ ಹಾಗೂ ಉದ್ದಿಮೆದಾರರಿಗೆ ದೊರೆಯುವಂತೆ ಮಾಡಲು ಗ್ರಾಮ ಸಭೆ ನಡೆಸುವಾಗ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಕರೆಸಿ, ಮಾಹಿತಿ ಒದಗಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿ ಎಂ. ಲೀನಾ ನರೋನ್ಹ ಅವರು ಜಿಪಂ ಸಿಇಒಗಳು, ತಾಪಂ ಇಒಗಳಿಗೆ ಸೂಚಿಸಿದ್ದಾರೆ.
ಮೂರು ಕಂತಿನಲ್ಲಿ ಬಿಡುಗಡೆ: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಲ್ಲಿ ಹಣ ಇತ್ತೀಚೆಗೆ ಮೂರು ಕಂತಿನಲ್ಲಿ ಬಿಡುಗಡೆಯಾಗಿದೆ. ಫೆಬ್ರವರಿಯಲ್ಲಿ 31.55 ಕೋಟಿ ಹಾಗೂ 23.77 ಕೋಟಿ ಬಿಡುಗಡೆಯಾಗಿದ್ದರೆ ಮಾರ್ಚ್ನಲ್ಲಿ 23.80 ಲಕ್ಷ ಬಂದಿದೆ. ಈ ಹಣವನ್ನು ಮಾರ್ಗಸೂಚಿಯಲ್ಲಿ ಸೂಚಿಸಿರುವಂತೆ ವೆಚ್ಚ ಮಾಡಬೇಕು ಎಂದು ತಿಳಿಸಲಾಗಿದೆ.