ಹೆಜ್ಜೇನು ದಾಳಿ: 30 ಮಂದಿಗೆ ಗಾಯ
ಶ್ರೀನಿವಾಸಪುರ: ಹೆಜ್ಜೇನು ನೋಣಗಳ ದಾಳಿಯಿಂದ ರಸ್ತೆಯಲ್ಲಿ ಓಡಾಡುವ 20-30 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಪಟ್ಟಣದ ರೇಲ್ವೆ ನಿಲ್ದಾಣದ ಬಳಿ ಸಂಭವಿಸಿದೆ. ಭಾನುವಾರ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಾರುಕಟ್ಟೆಗೆಂದು ಬಂದು ಪಣಸಮಾಕನಹಳ್ಳಿ, ಚಲ್ದಿಗಾನಹಳ್ಳಿ, ಗುಂಡಮನತ್ತ ಮತ್ತಿತರೆ ಗ್ರಾಮಗಳ ಗ್ರಾಮಸ್ಥರು ದ್ವಿಚಕ್ರ ವಾಹನ ಹಾಗೂ ನಡೆದುಬಂದಿದ್ದರು. ಊರಿಗೆ ತೆರಳುವಾಗ ರೇಲ್ವೆ ನಿಲ್ದಾಣದ ಬಳಿ ಮರಕ್ಕೆ ಕಟ್ಟಿದ್ದ ಹೆಜ್ಜೇನು ನೋಣಗಳು ಏಕಾಏಕಿ ಜನರ ಮೇಲೆ ದಾಳಿ ನಡೆಸಿದವು. ಇದರಿಂದ ಸುಮಾರು 20 ರಿಂದ 30 ಮಂದಿ ಗಾಯಗೊಂಡರು. ಕೆಲವರು ರಸ್ತೆ ಮೇಲೆ ಬಿದ್ದು ಒದ್ದಾಡಿದರು. ಈ ಸಂದರ್ಭ ವೇಣು ವಿದ್ಯಾ ಸಂಸ್ಥೆಯವರು ಶಾಲೆಗೆ ಕರೆದೊಯ್ದು ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಜನರನ್ನು ದಾಖಲಿಸಿದರು. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ ರವಾನಿಸಲಾಗಿದೆ.