ಉಪ್ಪಿನಂಗಡಿ: ಸಹಸ್ರಲಿಂಗೇಶ್ವರ ದೇವಳದ ಶಿವರಾತ್ರಿ ಮಖೆ ಸಂಭ್ರಮ
ಉಪ್ಪಿನಂಗಡಿ: ಇಲ್ಲಿನ ಇತಿಹಾಸ ಪ್ರಸಿದ್ಧ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಶಿವರಾತ್ರಿ ಮಖೆ (ಮೂರನೇ ಮಖೆ) ಜಾತ್ರೆಯು ಭಾನುವಾರ ರಾತ್ರಿ ಸಂಪನ್ನಗೊಂಡು ಸೋಮವಾರ ಬೆಳಿಗ್ಗೆ ಪವಿತ್ರ ಮಖೆ ತೀರ್ಥ ಸ್ನಾನ, ಸಂಭ್ರಮದ ರಥೋತ್ಸವ ಜರುಗಿತು.
ದೇವಾಲಯದಲ್ಲಿ ನಡೆಯುವ ಮೂರು ಮಖೆ ಜಾತ್ರೆಗಳ ಪೈಕಿ ಕೊನೆಯ ಮಖೆ ಜಾತ್ರೆಯಾಗಿಯೂ ಪ್ರಸಿದ್ಧಿಯಾಗಿರುವ ಶಿವರಾತ್ರಿ ಮಖೆಯಲ್ಲಿ ಆದಿತ್ಯವಾರ ಸೂರ್ಯಾಸ್ತ ಮಾನದಿಂದ ಹಿಡಿದು ಸೋಮವಾರ ಮಧ್ಯಾಹ್ನದವರೆಗೆ ಉದ್ಭವ ಲಿಂಗದಲ್ಲಿ ಪೂಜಾ ಕೈಂಕರ್ಯಗಳು ನಡೆದವು.
ಆದಿತ್ಯವಾರ ರಾತ್ರಿ ಶ್ರೀ ರಾಮಚಂದ್ರಾಪುರ ಮಠದ ವತಿಯಿಂದ 167 ವೈದಿಕ ಪರಂಪರೆಯವರ ಭಾಗೀಧಾರಿಕೆಯಿಂದ ಶತರುದ್ರ ಪಾರಾಯಣವು ಉದ್ಭವ ಲಿಂಗದ ಬಳಿ ನಡೆದು ಶಿವರಾತ್ರಿ ಉತ್ಸವಕ್ಕೆ ವಿಶೇಷ ಮೆರಗು ನೀಡಿತು.
ಸೋಮವಾರದಂದು ಪ್ರಾತಃಕಾಲ ನದಿ ಸಂಗಮ ಸ್ಥಳದಲ್ಲಿ ಸಾವಿರಾರು ಭಕ್ತರು ಪವಿತ್ರ ಮಖೆ ತೀರ್ಥ ಸ್ನಾನ ಮಾಡಿ ದೇವರ ದರ್ಶನ ಪಡೆದರು. ದೇವಳದಲ್ಲಿ ಬಲಿ ಉತ್ಸವ ಜರಗಿ ರಥೋತ್ಸವ ನಡೆಯಿತು. ಬಳಿಕ ದೇವರ ಉತ್ಸವ, ದರ್ಶನ ಬಲಿ, ಮಹಾಕಾಳಿ ನೇಮಕ್ಕೆ ಪಡಿಯಕ್ಕಿ ಕೊಡುವುದು, ಮಹಾಪೂಜೆ, ಮೊದಲಾದ ಧಾರ್ಮಿಕ ವಿಧಿ ವಿಧಾನಗಳು ನಡೆದು ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು.