ಕುಸಿದು ಬಿದ್ದು ವ್ಯಕ್ತಿ ಸಾವು
ಬ್ರಹ್ಮಾವರ: ವಿಪರೀತ ಕಾಯಿಲೆಯಿಂದ ನಿತ್ರಾಣಗೊಂಡ ವ್ಯಕ್ತಿಯೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ವಾರಂಬಳ್ಳಿ ಗ್ರಾಮದ ಗೋವೆಕಟ್ಟೆ ಎಂಬಲ್ಲಿ ಭಾನುವಾರ ನಡೆದಿದೆ. ಪುತ್ತೂರಿನ ಕೊಳಂಬೆಗುಡ್ಡೆ ಮನೆಯ ನಿವಾಸಿ ಸುಬ್ರಹ್ಮಣ್ಯ ಆಚಾರ್ಯ (32) ಮೃತರು. ಇವರು ಸುಮಾರು 4 ತಿಂಗಳಿನಿಂದ ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದು ದೇಹದಲ್ಲಿ ಅಲರ್ಜಿ ಕೂಡ ಆಗಿತ್ತು. ಭಾನುವಾರ ಬೆಳಗ್ಗೆ 10 ಗಂಟೆಗೆ ವಾರಂಬಳ್ಳಿ ಗ್ರಾಮದ ಗೋವೆಕಟ್ಟೆ ಎಂಬಲ್ಲಿ ನಡೆದುಕೊಂಡು ಹೋಗುವಾಗ ಕಾಯಿಲೆಯಿಂದಾಗಿ ನಿತ್ರಾಣಗೊಂಡು ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಸಹೋದರ ನಾಗೇಶ್ ಆಚಾರ್ಯ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಲ್ಲಿನ ಮೇಲೆ ಬಿದ್ದು ವ್ಯಕ್ತಿ ಸಾವು
ಮಣಿಪಾಲ: ಕಲ್ಲಿನ ಮೇಲೆ ಬಿದ್ದು ಅಪರಿಚಿತ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಇಲ್ಲಿನ ಎಂ.ಐ.ಟಿ ಜಂಕ್ಷನ್ ಬಳಿ ಇರುವ ಗ್ರೀನ್ ಪಾರ್ಕ್ ಹೊಟೇಲ್ ಎದುರು ಭಾನುವಾರ ರಾತ್ರಿ ನಡೆದಿದೆ. ಅಪರಿಚಿತ ವ್ಯಕ್ತಿ ಸುಮಾರು 38 ವರ್ಷದವನಾಗಿರಬಹುದು ಎಂದು ಅಂದಾಜಿಸಲಾಗಿದೆ. ವೀಪರೀತ ಕುಡಿದಿದ್ದು ಈತ ಮೂತ್ರ ವಿಸರ್ಜನೆ ಮಾಡಲು ಹೋಗಿ ತನ್ನ ಎದುರು ಇದ್ದ ಒಂದು ದೊಡ್ಡ ಕಲ್ಲಿನ ಮೇಲೆ ಆಯ ತಪ್ಪಿ ಬಿದ್ದಿದ್ದಾನೆ. ಇದರ ಪರಿಣಾಮ ತಲೆಗೆ ಪೆಟ್ಟಾಗಿದ್ದರಿಂದ ಮೃತಪಟ್ಟಿದ್ದಾರೆ ಎಂಬುದಾಗಿ ರಾಜು ನಾಯ್ಕ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ರಿಕ್ಷಾ ಚಾಲಕನ ಮೇಲೆ ಹಲ್ಲೆ
ಮೂಲ್ಕಿ: ಹಿಂದಿನ ಬಾಡಿಗೆ ಪಾವತಿಸುವಂತೆ ಕೇಳಿದ ರಿಕ್ಷಾ ಚಾಲಕನಿಗೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಘಟನೆ ನಡೆದಿದೆ. ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಕೆಮ್ರಾಲ್ ಪಂಚಾಯಿತಿನ ಪಕ್ಷಿಕೆರೆ ಚರ್ಚ್ ಬಳಿಯ ರಿಕ್ಷಾ ಪಾರ್ಕ್‌ನಲ್ಲಿದ್ದ ರಿಕ್ಷಾ ಚಾಲಕ ಮಹಮ್ಮದ್ ಆಶ್ರಫ್ ಅವರ ಬಳಿ ಬಂದ ಸ್ಥಳೀಯ ನಿವಾಸಿ ರಮೇಶ್ ಅವರು ರಿಕ್ಷಾ ಬಾಡಿಗೆಗೆ ಬರಲು ತಿಳಿಸಿದಾಗ ಮಹಮ್ಮದ್ ಆಶ್ರಫ್ ಹಿಂದಿನ ಬಾಡಿಗೆ ಬಾಕಿ ಇದ್ದು, ಅದನ್ನು ನೀಡುವಂತೆ ತಿಳಿಸಿದರು. ಇದರಿಂದ ಕೆರಳಿದ ರಮೇಶ್ ಅವಾಚ್ಯ ಶಬ್ದಗಳಿಂದ ಬೈದು ಆಶ್ರಫ್‌ನನ್ನು ಹೊಡೆದು ಗಾಯಗೊಳಿಸಿದ್ದಾನೆ. ತೀವ್ರ ಗಾಯಗೊಂಡ ಆಶ್ರಫ್ ಮೂಲ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.