ನಾಲ್ಕರ ಬಾಲಕ ಎಂಡೋಗೆ ಬಲಿ
ಉಪ್ಪಿನಂಗಡಿ: ಕೊಕ್ಕಡದ ಎಂಡೋಸಲ್ಫಾನ್ ಪೀಡಿತ ಬಾಲಕ ಅಕ್ಷಯ್ (4) ಸೋಮವಾರ ಮೃತಪಟ್ಟಿದ್ದಾನೆ. ಕೊಕ್ಕಡದ ಕೋರಿಗದ್ದೆ ನಿವಾಸಿ ವಿದ್ಯಾಲಕ್ಷ್ಮಿ ಮತ್ತು ಶಶಿಧರ ದಂಪತಿಯ ಏಕೈಕ ಪುತ್ರನಾಗಿದ್ದ ಈತ ಹುಟ್ಟಿದಾಗಿನಿಂದ ಹೈಡ್ರೋಸಯಾಲಿಸ್ ಕಾಯಿಲೆಗೆ ತುತ್ತಾಗಿ ತಲೆ ಸಹಜ ಸ್ಥಿತಿಗಿಂತ ದೊಡ್ಡದಾಗಿ ಬೆಳೆಯುವ ಸಮಸ್ಯೆಗೆ ಒಳಗಾಗಿದ್ದ. ಭಾನುವಾರ ಸಮಸ್ಯೆ ಉಲ್ಬಣಗೊಂಡು ತೀರ ಅಸ್ವಸ್ಥನಾಗಿದ್ದ ಬಾಲಕ ಸೋಮವಾರದಂದು ಮನೆಯಲ್ಲಿ ಮೃತಪಟ್ಟಿದ್ದಾನೆ. ಕಡುಬಡತನದಲ್ಲಿರುವ ಬಾಲಕನ ಕುಟುಂಬ ಇದೀಗ ಬದುಕಿನ ಆಶಾ ಕಿರಣವಾಗಿದ್ದ ಮಗನ ಅಕಾಲಿಕ ಮರಣದಿಂದ ದಿಕ್ಕು ಕಾಣದಂತಾಗಿದೆ. ಎಂಡೋ ವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಮೃತ ಬಾಲಕನ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಾರೆ. ಎಂಡೋ ಪೀಡಿತರಾಗಿ ಬದುಕನ್ನು ಮುದುಡಿಸಿಕೊಂಡ ಸಂತ್ರಸ್ತರ ಬದುಕಿನಲ್ಲಿ ಬೆಳಕು ಮೂಡಿಸಲು ಜಿಲ್ಲಾಡಳಿತ ಹಾಗೂ ಸರ್ಕಾರ ಪರಿಣಾಮಕಾರಿಯಾಗಿ ಸ್ಪಂದಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಎಂಡೋಸಲ್ಫಾನ್ ಸಂತ್ರಸ್ತರು ಸಹಜ ನ್ಯಾಯ ದೊರೆಯದೇ ಬದುಕು ಕೊನೆಗಾಣಿಸುವ ದುರವಸ್ಥೆ ಬಂದಿದೆ ಎಂದು ಖೇದ ವ್ಯಕ್ತಪಡಿಸಿದರು.