ಪಂಜಿಕಲ್: ಸ್ನಾನಕ್ಕೆ ಇಳಿದ ವ್ಯಕ್ತಿ ನೀರಲ್ಲಿ ಮುಳುಗಿ ಸಾವು
ಸುಳ್ಯ: ಪಂಜಿಕಲ್ ಸೇತುವೆಯ ಕೆಳಭಾಗದಲ್ಲಿ ಭಾನುವಾರ ಮಧ್ಯಾಹ್ನ ಸ್ನಾನಕ್ಕೆ ಇಳಿದಿದ್ದ ವ್ಯಕ್ತಿಯೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಕಾಣೆಯಾಗಿದ್ದು, ಅವರ ಮೃತದೇಹ ಸೋಮವಾರ ಪತ್ತೆಯಾಗಿದೆ.
ಮೃತರನ್ನು ಕೇರಳದ ಕಣ್ಣೂರು ಚೆಂಬತ್ತೊಟ್ಟಿ ನಿವಾಸಿ ಸನ್ನಿ (42) ಎಂದು ಗುರುತಿಸಲಾಗಿದೆ.
ಕನಕಮಜಲಿನಲ್ಲಿ ರಬ್ಬರ್ ಮರಗಳನ್ನು ಕಡಿಯಲು 8 ತಿಂಗಳ ಹಿಂದೆ ಕೇರಳದಿಂದ ಬಂದಿದ್ದ 12 ಜನರ ತಂಡದ ಸದಸ್ಯರಾಗಿದ್ದ ಸನ್ನಿ ಪ್ರತಿದಿನ ತನ್ನ ಸ್ನೇಹಿತರೊಂದಿಗೆ ಸೇತುವೆಯ ಕೆಳಗೆ ಸ್ನಾನಕ್ಕೆ ತೆರಳುತ್ತಿದ್ದರು.
ರಕ್ತದೊತ್ತಡ ಸಮಸ್ಯೆ ಇದ್ದುದರಿಂದ ಸನ್ನಿ ದಡದ ಬದಿಯಲ್ಲೇ ಸ್ನಾನ ಮಾಡುತ್ತಿದ್ದರು. ಮಧ್ಯ ಭಾಗದಲ್ಲಿ ಸ್ನಾನ ಮಾಡುತ್ತಿದ್ದ ಸ್ನೇಹಿತರು ಸ್ನಾನ ಮುಗಿಸಿ ಮರಳಿದಾಗ ಸನ್ನಿ ಕಂಡುಬರಲಿಲ್ಲ. ಅವರ ಬಟ್ಟೆ ಹಾಗೂ ಚಪ್ಪಲಿ ದಡ ಬದಿಯಲ್ಲಿಯೇ ಇದ್ದುದನ್ನು ಗಮನಿಸಿ ಗಾಬರಿಗೊಂಡು ಹುಡುಕಾಡತೊಡಗಿದರು.
ವಿಷಯ ತಿಳಿದ ಸ್ಥಳೀಯರು ಅವರ ಜೊತೆಗೂಡಿ ಹುಡುಕಾಟದಲ್ಲಿ ತೊಡಗಿದರು. ರಾತ್ರಿಯಿಡೀ ಹುಡುಕಾಡಿದರೂ ಸನ್ನಿಯವರ ಯಾವುದೇ ಸುಳಿವು ದೊರೆಯಲಿಲ್ಲ. ಸೋಮವಾರ ಮುಂಜಾನೆ 7 ಗಂಟೆಗೆ ನಾಪತ್ತೆಯಾದ ಸ್ಥಳದ ಸ್ವಲ್ಪ ದೂರದಲ್ಲಿ ಸನ್ನಿಯವರ ಮೃತದೇಹ ಪತ್ತೆಯಾಯಿತು.
ಮೃತರು ವಿವಾಹಿತರಾಗಿದ್ದು, ತಂದೆ, ತಾಯಿ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ. ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಹುಟ್ಟೂರಿಗೆ ಕೊಂಡೊಯ್ಯಲಾಯಿತು.