ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ಬೆದರಿಕೆ

Mainashree
Updated On : 13 Mar 2013, 12:12 pm

ಕ.ಪ್ರ. ವಾರ್ತೆ  ಬೆಳ್ತಂಗಡಿ ಮಾ.12-
ನಾಲ್ವರು ಯುವಕರು ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ಬೆದರಿಕೆ ಹಾಕಿದ ಘಟನೆ ಮಿತ್ತಬಾಗಿಲು ಗ್ರಾಮದಲ್ಲಿ ನಡೆದಿದೆ.
ದನ ಮೇಯಿಸುತ್ತಿದ್ದ ಮಹಿಳೆಯಿಂದಾಗಿ ಬಾಲಕಿ ರಕ್ಷಿಸಲ್ಪಟ್ಟಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಿತ್ತಬಾಗಿಲು ಗ್ರಾಮದ ಕಾಜೂರುಬಳಿಯ ಭಂಡಾರಿ ಕೋಡಿ ಶಾಲೆ ಬಳಿಯ ಪಾದೆಗುತ್ತು ಮನೆಯ ಅಬ್ದುಲ್ ಖಾದರ್ ಅವರ ಪುತ್ರ ಶಾಕೀರ್(18), ಮಹಮ್ಮದ್ ಯಾನೆ ಚೆರಿಮೊನ್ ಎಂಬುವರ ಪುತ್ರ ಫಯಾದ್(19), ಚೆರಿಯ ಯಾನೆ ಮಹಮ್ಮದ್ ಎಂಬುವರ ಪುತ್ರ ನಾಸಿರ್(20) ಹಾಗೂ ನೌಶಾದ್ (18) ಅತ್ಯಾಚಾರ ನಡೆಸಲೆತ್ನಿಸಿದವರು.
ಇವರು ಮಿತ್ತಬಾಗಿಲು ಗ್ರಾಮದ 8 ನೇ ತರಗತಿ ವಿದ್ಯಾರ್ಥಿನಿಯನ್ನು ಕಳೆದ ಕೆಲವು ದಿನಗಳಿಂದ ಶಾಲೆಗೆ ಹೋಗುತ್ತಿದ್ದಾಗ ತಮ್ಮೊಂದಿಗೆ ಬರಲು ಒತ್ತಾಯಿಸುತ್ತಿದ್ದರು. ಇವರ ಈ ಕೃತ್ಯದಿಂದ ಬೇಸತ್ತ ಆಕೆ ಮನೆಯವರಿಗೆ ವಿಷಯ ತಿಳಿಸಿದ್ದಳು. ಅದಕ್ಕೆ ಅವರು ಆಕೆಯ ಶಾಲಾ ಶಿಕ್ಷಕಿಯೊಂದಿಗೆ ತೆರಳಲು ಮತ್ತು ಬರಲು ವ್ಯವಸ್ಥೆ ಮಾಡಿದ್ದರು. ಆದರೆ, ಮಾ.9 ರಂದು ಶಿಕ್ಷಕಿಗೆ ವಿಶೇಷ ತರಗತಿಗಳು ನಡೆಸಲು ಇದ್ದುದರಿಂದ ವಿದ್ಯಾರ್ಥಿನಿ ಏಕಾಂಗಿಯೇ ಮಧ್ಯಾಹ್ನ ಮನೆ ದಾರಿ ಹಿಡಿದಿದ್ದಳು.
ದಾರಿಯಲ್ಲಿ ಸಿಗುವ ನೇತ್ರಾವತಿ ನದಿ ದಾಟುವ ಸಂದರ್ಭವನ್ನು ದುರುಪಯೋಗಿಸಿಕೊಂಡು ನಾಲ್ಕು ಮಂದಿ ಯುವಕರು ತಮ್ಮೊಂದಿಗೆ ಬರಲು ಬಲವಂತ ಮಾಡಿದಲ್ಲದೆ ಮೈಗೆ ಕೈ ಹಾಕಿದರು. ಬಳಿಕ ಹೊತ್ತೊಯ್ಯಲು ಅವರು ನಿರ್ಧರಿಸಿದಾಗ ಬೆಚ್ಚಿದ ಹುಡುಗಿ ಬೊಬ್ಬೆ ಹಾಕಿದಳು.
ಈ ಬೊಬ್ಬೆ ಸನಿಹವೇ ದನ ಮೇಯಿಸುತ್ತಿದ್ದ ಮಹಿಳೆಯ ಕಿವಿಗೆ ಬಿತ್ತು. ಆಕೆ ಓಡೋಡಿ ಬಂದು ಹುಡುಗಿಯನ್ನು ರಕ್ಷಿಸಿದಳು. ಈ ಸಂದರ್ಭದಲ್ಲಿ ವಿಚಾರವನ್ನು ಯಾರಲ್ಲಾದರೂ ಹೇಳಿದರೆ ಕೊಂದು ಬಿಡುವುದಾಗಿ ಬೆದರಿಸಿದ್ದಾರೆ.
ರಾಜಿಯಲ್ಲಿ ಪ್ರಕರಣ ಮುಗಿಸಲು ಯತ್ನ: ಮನೆಯವರು ಮರ್ಯಾದೆಗಂಜಿ ಪ್ರಕರಣವನ್ನು ಪೊಲೀಸರಿಗೆ ಹೇಳಲು ಹಿಂದೇಟು ಹಾಕುತ್ತಿದ್ದರು. ಕೊನೆಗೆ ಹೇಗೋ ಮನಸ್ಸು ಮಾಡಿ ಪ್ರಕರಣವನ್ನು ಠಾಣೆಗೆ ಒಯ್ಯಲಾಯಿತು. ಆದರೆ, ಬೆಳ್ತಂಗಡಿ ಪೊಲೀಸರು ರಾಜಿಯಲ್ಲಿ ಮುಗಿಸಲು ಪ್ರಯತ್ನಿಸಿದರು ಎಂದು ಹೇಳಲಾಗುತ್ತಿದೆ. ಇತ್ತ ಯುವಕರ ಮನೆಯವರೂ ರಾಜಿಯಲ್ಲಿ ಮುಗಿಸಲು ಪ್ರಯತ್ನವನ್ನೇ ಮಾಡಿದ್ದರು. ಆದರೆ, ಹಿಂದು ಸಂಘಟನೆಗಳ ಕಾರ್ಯಕರ್ತರು ಉನ್ನತ ಪೊಲೀಸ್ ಅಧಿಕಾರಿಗಳಿಗೆ ವಿಷಯ ತಿಳಿಸಿ ಬೆಳ್ತಂಗಡಿ ಪೊಲೀಸರು ಪ್ರಕರಣವನ್ನು ದಾಖಲು ಮಾಡಿಸುವಲ್ಲಿ ಯಶಸ್ವಿಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement