ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕರುನಾಡಲ್ಲಿ ಕನ್ನಡಕ್ಕೇ ಮೊದಲ ಸ್ಥಾನ

Lingaraj Badiger
Updated On : 14 Mar 2013, 11:52 am

ದಿ. ಮುಕ್ಕಾಟೀರ ಕರುಂಬಯ್ಯ ವೇದಿಕೆ (ಕುಟ್ಟ): ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಮೊದಲ ಸ್ಥಾನ ಎಂಬುದನ್ನು ಯಾರೂ ಮರೆಯಬಾರದು. ಕನ್ನಡ ಭಾಷೆ ಬಗ್ಗೆ ಸ್ವಾಭಿಮಾನ ಮತ್ತು ಅಭಿಮಾನ ಎಲ್ಲರಲ್ಲಿಯೂ ಇರಬೇಕು ಎಂದು ವಿಧಾನ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಕರೆ ನೀಡಿದ್ದಾರೆ.
ಕರ್ನಾಟಕ- ಕೇರಳ ಗಡಿಯಲ್ಲಿನ ಕುಟ್ಟ ಗ್ರಾಮದ ಕೊಡವ ಸಮಾಜದಲ್ಲಿ ನಡೆದ ವಿರಾಜಪೇಟೆ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಬೋಪಯ್ಯ, ರಾಜ್ಯದಲ್ಲಿ ಕನ್ನಡ ಭಾಷೆಗೆ ಮೊದಲ ಸ್ಥಾನವಿದೆ. ಆದರೆ ಬೆಂಗಳೂರಿನಂತ ಮಹಾನಗರಗಳಲ್ಲಿ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಕಡಿಮೆ ಇದೆ. ಹಾಗೆಯೇ ರಾಜ್ಯದ ಗಡಿ ಭಾಗಗಳಲ್ಲಿ ಕನ್ನಡ ಭಾಷಿಗರ ಸ್ಥಿತಿ ಸುಧಾರಿಸಿಲ್ಲ. ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕಿದೆ ಎಂದು ಹೇಳಿದರು.
ನಾಡಿನಲ್ಲಿ ಕನ್ನಡ ಭಾಷೆ ಬರದಿದ್ದರೆ ಹೆಮ್ಮೆಯಿಂದ ಹೇಳಿಕೊಳ್ಳುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ ಎಂದು ವಿಷಾಧಿಸಿದ ಬೋಪಯ್ಯ, ಈ  ಭಾವನೆ ತೊಲಗಬೇಕು. ಕನ್ನಡ ಭಾಷೆ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಅಭಿಮಾನವಿರಬೇಕು. ಇತರ ಭಾಷೆಗಳ ಬಗ್ಗೆ ವ್ಯಾಮೋಹ ಬಿಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೊಂದರೆಗೆ ಸಿಲುಕಬೇಕಾಗುತ್ತದೆ. ಇತರ ಭಾಷಿಗರು ಕನ್ನಡವನ್ನು ಕಲಿಯಬೇಕು. ಕನ್ನಡ ಭಾಷೆ ಬಗ್ಗೆ ತಿರಸ್ಕಾರ ಮನೋಭಾವ ಸಲ್ಲದು ಎಂದು  ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷಾ ಬೆಳವಣಿಗೆ, ಸಂಸ್ಕೃತಿ, ಆಚಾರ- ವಿಚಾರವನ್ನು ಉಳಿಸುವಲ್ಲಿ ಶ್ರಮಿಸುತ್ತಿದೆ. ಮುಂದಿನ ವಾರ ಕರಿಕೆಯಲ್ಲಿ ಗಡಿ ಉತ್ಸವ ನಡೆಯಲಿದೆ ಎಂದು ಕೆ.ಜಿ. ಬೋಪಯ್ಯ ತಿಳಿಸಿದರು.
ಸಾಹಿತಿಕಗಳ ವಾಕ್ಸಮರ ನಿಲ್ಲಲಿ: ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಎಸ್.ಎಲ್. ಬೈರಪ್ಪ ಮತ್ತು ಯು.ಆರ್. ಅನಂತಮೂರ್ತಿ ಅವರ ನಡುವೆ ವಾಕ್ ಸಮರ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ . ಇಂಥ ವಾಕ್ಸಮರ ನಡೆಸುತ್ತಿರುವ ಸಾಹಿತಿಗಳನ್ನು ಕನ್ನಡ ಭಾಷೆ ಬಗೆಗೆ ಇವರಿಗಿರುವ ಕಾಳಜಿ ಏನು ಎಂದು ಪ್ರಶ್ನಿಸಬೇಕಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಎಂದಿಗೂ ಅಳಿಯುವುದಿಲ್ಲ. ಕನ್ನಡ ಭಾಷೆ ಎಂದೆಂದಿಗೂ ಸರ್ವಸ್ವ ಎಂದ ಅವರು ಕನ್ನಡ ಭಾಷೆಯ ಜತೆಗೆ ಇತರ ಭಾಷೆಗಳನ್ನು ಕಲಿಯುವುದು ಅಗತ್ಯ. ಆರ್ಥಿಕ ಸದೃಢತೆ ಹಾಗೂ ಜ್ಞಾನಾರ್ದನೆಗೆ ಇತರ ಭಾಷೆಗಳನ್ನು ಕಲಿಯುವುದು ಅಗತ್ಯ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಹಿಂದೆ ಕರ್ನಾಟಕ ಸಾಹಿತ್ಯ ಪರಿಷತ್ತು ಎಂದು ಇತ್ತು. ಸರ್.ಎಂ. ವಿಶ್ವೇಶ್ವರಯ್ಯನವರು 1930ರ ದಶಕದಲ್ಲಿಯೇ ಸಮಗ್ರ ಕರ್ನಾಟಕ ಎಂಬ ಭಾವನೆಯನ್ನು ಕಂಡಿದ್ದರು. ಸರ್.ಎಂ. ವಿಶ್ವೇಶ್ವರಯ್ಯನವರ ಉದಾತ್ತ ಚಿಂತನೆ ಎಂದೆಂದಿಗೂ ಸ್ಮರಣೀಯ ಎಂದು ನಾಣಯ್ಯ ನೆನಪಿಸಿಕೊಂಡರು.
ಮುಂದಿನ ವರ್ಷ ಕೊಡಗಿನಲ್ಲಿ ನಡೆಯುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಬರೆದಿರುವ ಚಿಕ್ಕವೀರರಾಜೇಂದ್ರರ ಕಾದಂಬರಿ ಆಧಾರಿತ ಸಿನಿಮಾ ತೆರೆಗೆ ತರುವಂತಾಗಬೇಕು ಎಂದು ಎಂ.ಸಿ. ನಾಣಯ್ಯ ಸಲಹೆ ನೀಡಿದರು.
ಕನ್ನಡಿಗರು ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು. ಇತರ ಭಾಷೆಗಳನ್ನು ಪ್ರೀತಿಸಬೇಕು. ಕನ್ನಡ ಭಾಷೆಗೆ ಆದ್ಯತೆ ನೀಡಬೇಕು. ಓದುವ ಹವ್ಯಾಸವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದೂ ನಾಣಯ್ಯ ಕಿವಿಮಾತು ಹೇಳಿದರು.
ಮುಂದಿನ ಸಮ್ಮೇಳನದಲ್ಲಿ ವಿಶ್ವಕೋಶ: ಕ.ಸಾ.ಪ. ಜಿಲ್ಲಾ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕೊಡಗಿನಲ್ಲಿ ಮುಂದಿನ ವರ್ಷ ನಡೆಯುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೊಡಗಿನ ಆಚಾರ- ವಿಚಾರ, ಸಂಸ್ಕೃತಿಯ ಸಮಗ್ರ ಅಧ್ಯಯವನ್ನು ಒಳಗೊಂಡ ವಿಶ್ವಕೋಶವನ್ನು ತರಲು ಚಿಂತನೆ ಮಾಡಲಾಗಿದೆ. ಇದಕ್ಕಾಗಿ ಹಿರಿಯ ರಾಜಕಾರಣಿಗಳು, ಗಣ್ಯರು, ಸಾಹಿತಿಗಳು, ಕ್ರೀಡಾಪಟುಗಳು, ಸೈನಿಕರು ಮತ್ತಿತರರ ಸಲಹೆ ಮಾರ್ಗದರ್ಶನ ಪಡೆದು ವಿಶ್ವಕೋಶವನ್ನು ತರಲಾಗುವುದು ಎಂದು ತಿಳಿಸಿದರು.
ಜಿ.ಪಂ. ಉಪಾಧ್ಯಕ್ಷೆ ಬಿದ್ದಂಡ ಉಷಾದೇವಮ್ಮ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಣಿನಂಜಪ್ಪ, ಸದಸ್ಯರಾದ ಶರೀನ್ ಸುಬ್ಬಯ್ಯ, ಸರಿತಾ ಪೂಣಚ್ಚ, ವಿರಾಜಪೇಟೆ ತಾ.ಪಂ. ಅಧ್ಯಕ್ಷ ಅರುಣ್ ಭೀಮಯ್ಯ, ಉಪಾಧ್ಯಕ್ಷೆ ತಿತೀರ ಊರ್ಮಿಳಾ, ಅರುಣ್ ಮಾಚಯ್ಯ, ಶಿವುಮಾದಪ್ಪ, ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಚೋಡುಮಾಡ ಸೂರತ್ ಸುಬ್ಬಯ್ಯ ಇದ್ದರು.
ವಿರಾಜಪೇಟೆ ತಾಲೂಕು ಕ.ಸಾ.ಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೊನ್ನಂಪೇಟೆ ಹೋಬಳಿ ಕ.ಸಾ.ಪ ಅಧ್ಯಕ್ಷ ಬಿ.ಎನ್. ಪ್ರಕಾಶ್ ಸ್ವಾಗತಿಸಿದರು. ಕುಟ್ಟ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಶಿಕ್ಷಕರಾದ ಕೃಷ್ಣಚೈತನ್ಯ ಮತ್ತು ಕೆ. ಚಂದ್ರಶೇಖರ ರೈತ ಗೀತೆ ಹಾಡಿದರು. ಬಿರುನಾಣಿಯ ಮರೆನಾಡು ಪ್ರೌಢಶಾಲೆಯ ವಿದ್ಯಾರ್ಥಿಗಳು ಹಚ್ಚೇವು ಕನ್ನಡ ದೀಪ ಗೀತೆಯನ್ನು ಹಾಡಿದರು. ಸ್ಮರಣ ಸಂಚಿಕೆ ಪ್ರಧಾನ ಸಂಪಾದಕ ರಫೀಕ್ ತೂಚಮಕೇರಿ, ಶಿಕ್ಷಕರಾದ ಡಿ. ಚಂದನ ನಿರೂಪಿಸಿದರು. ಚೆಕ್ಕೇರಿ ಮುತ್ತಣ್ಣ ಸ್ಮಾರಕ ದ್ವಾರವನ್ನು ಮಾಜಿ ಶಾಸಕ ಸಿ.ಎಸ್. ಅರುಣ್ ಮಾಚಯ್ಯ ಉದ್ಘಾಟಿಸಿದರು. ಅಜ್ಜಮಾಡ ಸ್ಮಾರಕ ಸಭಾಂಗಣವನ್ನು ಹೊಟ್ಟೆಂಗಡ ಎಂ. ರಮೇಶ್ ಉದ್ಘಾಟಿಸಿದರು. ಮುಕ್ಕಾಟ್ಟೀರ ಕರುಂಬಯ್ಯ ವೇದಿಕೆಯನ್ನು ಶಾಸಕ ಎಂ.ಸಿ. ನಾಣಯ್ಯ ಉದ್ಘಾಟಿಸಿದರು. ನೆಲ್ಲಿರ ಕುಟ್ಟಯ್ಯ ಸ್ಮಾರಕ ಪುಸ್ತಕ ಮಳಿಗೆಯನ್ನು, ಕುಪ್ಪುಡೀರ ಪೊಣ್ಣುಮುತ್ತಪ್ಪ ಉದ್ಘಾಟಿಸಿದರು, ಜೆ.ಕೆ. ಮುತ್ತಮ್ಮ ಸ್ತ್ರೀಶಕ್ತಿ ಮಳಿಗೆಯನ್ನು ಆರ್. ಮಾಲಾಮಣಿ ಉದ್ಘಾಟಿಸಿದರು. ಹೊಟ್ಟೆಂಗಡ ಮುತ್ತಣ್ಣ ಸ್ಮಾರಕ ಚಿತ್ರಕಲಾ ಪ್ರದರ್ಶನ ಮಳಿಗೆಯನ್ನು ಕಾಕೇರ ಸುಬ್ರಾಯ ಉದ್ಘಾಟಿಸಿದರು. ವಿರಾಜಪೇಟೆ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಕೆ.ಎನ್. ಸಂದೀಪ್, ಪಿ.ಕೆ. ಪ್ರಶಾಂತ್, ರೆಫಲ್ ಕೊಲಸೋ, ಅಬ್ದುಲ್ ರಜಾಕ್ ಮಕ್ಕಾಟ್ಟೀರ ನವೀನ್ ಅಯ್ಯಪ್ಪ, ಬೊಜ್ಜಂಗಡ ಶೈಲಾ ಸುಬ್ರಮಣಿ, ಶಕುಂತಲಾ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement