ನೇತ್ರಾವತಿ ಉಳಿಕೆಗೆ ಜನಪ್ರತಿನಿಧಿಗಳು ಪಕ್ಷ ಭೇದ ಮರೆತು ಹೋರಾಡಲಿ: ಖಾದರ್
ಮಂಗಳೂರು: ನೇತ್ರಾವತಿ ನದಿ ತಿರುವು ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶಾಸಕರು ಪಕ್ಷ ಬೇಧ ಮರೆತು ಇಲ್ಲಿನ ಜನರಿಗಾಗಿ ಹೋರಾಟ ನಡೆಸಬೇಕು ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
ಇಲ್ಲಿ ರಾಜಕೀಯ ಪಕ್ಷ ಮುಖ್ಯವಾಗುವುದಿಲ್ಲ. ನಾವು ಪ್ರತಿನಿಧಿಸುವ ಊರಿನ ಜನರ ಹಿತ ಮುಖ್ಯ. ನಮ್ಮ ಜನರ ಹಿತ ಸಾಧನೆಗೆ ಎಲ್ಲ ಜನಪ್ರತಿನಿಧಿಗಳು ಒಗ್ಗಟ್ಟಾಗಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
2ಗೆ ಒಂದು ಕಿಲೊ ಅಕ್ಕಿ ನೀಡುವ ಸಚಿವ ಸಂಪುಟ ನಿರ್ಧಾರ ಕೇವಲ ಮತಗಳಿಕೆ ದೃಷ್ಟಿಯಿಂದ ಕೂಡಿದೆ. ಜನಪರ ಕಾಳಜಿ ಇದ್ದರೆ ಈ ಹಿಂದೆಯೇ ಇದನ್ನು ಜಾರಿಗೊಳಿಸಬೇಕಿತ್ತು. 2 ತಿಂಗಳು ಇರುವಾಗ ಈ ನಿರ್ಧಾರ ತೆಗೆದುಕೊಳ್ಳುವ ಅಗತ್ಯ ಇಲ್ಲ. ಮುಂದೆ ಬರುವ ಸರ್ಕಾರ 1ಗೆ ಅಥವಾ ಉಚಿತವಾಗಿ ಅಕ್ಕಿ ನೀಡಬಹುದು. ಅದು ಬೇರೆ ವಿಚಾರ ಎಂದರು.
ಅಂತರ್ ರಾಜ್ಯ ಮರಳು ಸಾಗಾಟಕ್ಕೆ ಇದ್ದ ನಿರ್ಬಂಧ ಸಡಿಲಿಕೆಯಿಂದ ಮರಳು ಬೇಡಿಕೆ ಹೆಚ್ಚಾಗಿ ದರ ಹೆಚ್ಚಲಿದೆ. ಇದರಿಂದ ಸ್ಥಳೀಯರು ಮನೆ ಕಟ್ಟಲು ಮರಳಿಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಸರ್ಕಾರ ಸ್ಥಳೀಯರಿಗೆ ಕನಿಷ್ಠ ದರ ನಿಗದಿ ಮಾಡಿದ ಬಳಿಕ ಹೊರ ರಾಜ್ಯಕ್ಕೆ ಹೆಚ್ಚಿನ ಬೆಲೆ ವಿಧಿಸಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ ಹದಗೆಟ್ಟಿದ್ದು, ಗ್ಯಾಂಬ್ಲಿಂಗ್, ಹಫ್ತಾ ವಸೂಲಿ ರಾಜಾರೋಶವಾಗಿ ನಡೆಯುತ್ತಿದೆ. ಪೊಲೀಸರ ಬಳಿ ಹೇಳಿದರೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಖಾದರ್ ಆರೋಪಿಸಿದರು.