ಹೆತ್ತ ತಂದೆಯನ್ನೇ ಕಾಡಿಗೆ ಅಟ್ಟಿದ ನಿರ್ದಯಿ ಮಕ್ಕಳು!
ಕ.ಪ್ರ. ವಾರ್ತೆ ವಿಟ್ಲ ಮಾ.13
ಜನ್ಮ ನೀಡಿದ ತಂದೆಯನ್ನೇ ಮಕ್ಕಳಿಬ್ಬರು ಚಾರ್ಮಾಡಿ ಘಾಟಿನ ಕಾಡಿನಲ್ಲಿ ಬಿಟ್ಟು ಬಂದ ಅಮಾನವೀಯ ಘಟನೆ ಪೆರಾಜೆ ಗ್ರಾಮದ ಮಿತ್ತಕೋಡಿ ಎಂಬಲ್ಲಿ ನಡೆದಿದೆ.
ಪೆರಾಜೆ ಗ್ರಾಮದ ಮಿತ್ತಕೋಡಿ ಆನಂದ ಹಾಗೂ ದಯಾನಂದ ಮನೆಯಿಂದ ತಮ್ಮ ತಂದೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ದೂರದ ಚಾರ್ಮಾಡಿ ಘಾಟಿಯ ಕಾಡಿನೊಳಗೆ ಬಿಟ್ಟು ಬಂದಿದ್ದಾರೆ. ಕೂಲಿ ಕಾರ್ಮಿಕರಾಗಿದ್ದ ಮಿತ್ತಕೋಡಿ ತನಿಯಪ್ಪ ಕುಲಾಲ್(58) ಕೆಲ ಸಮಯದ ಹಿಂದೆ ಕಿರು ಸಂಕ(ಪಾಪು)ದಿಂದ ಬಿದ್ದು ದುಡಿಯಲು ಅಶಕ್ತರಾಗಿ ಮನೆಯಲ್ಲಿಯೇ ಇದ್ದರು. ಈ ಮಧ್ಯೆ ಅವರು ಮನೆಯಲ್ಲಿ ಅಮಲು ಸೇವಿಸಿ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಅವರ ಇಬ್ಬರು ಪುತ್ರರಾದ ಆನಂದ ಹಾಗೂ ದಯಾನಂದ ತಂದೆಯನ್ನು ಮನೆಯಿಂದ ಹೊರ ಹಾಕಲು ಉಪಾಯ ಹೆಣೆದು, ಭಾನುವಾರ ಚಾರ್ಮಾಡಿ ಘಾಟಿಯ ಕಾಡಿನೊಳಗೆ ಬಿಟ್ಟು ಬಂದಿದ್ದಾರೆ. ಮಕ್ಕಳಿಂದ ಕಾಡಿಗೆ ತಳ್ಳಲ್ಪಟ್ಟ ತನಿಯಪ್ಪ ಕುಲಾಲ್ ದಿಕ್ಕುತೋಚದೇ ಕಾಡಿನಲ್ಲಿ ತಿರುಗುತ್ತಿದ್ದನ್ನು ಅವರ ತಮ್ಮನ ಮಕ್ಕಳು ಲಾರಿಯಲ್ಲಿ ಬರುತ್ತಿದ್ದಾಗ ನೋಡಿದ್ದಾರೆ. ದೊಡ್ಡಪ್ಪ ಯಾಕೆ ಕಾಡಿನಲ್ಲಿ ಅಲೆಯುತ್ತಿದ್ದಾರೆಂದು ವಿಚಾರಣೆ ಮಾಡಿದಾಗ ಅಣ್ಣಂದಿರು ಮಾಡಿದ ಕೃತ್ಯ ಬೆಳಕಿಗೆ ಬಂದಿದೆ. ಬಳಿಕ ಅವರನ್ನು ಮನೆಗೆ ವಾಪಸ್ ಕರೆದುಕೊಂಡು ಬಂದರು.
ಆದರೆ ತನಿಯಪ್ಪ ಅವರ ಮಕ್ಕಳು ತಮಗೆ ತಂದೆಯನ್ನು ಸಾಕಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾಗಿ ತಿಳಿದುಬಂದಿದೆ ಇದೀಗ ಪ್ರಕರಣ ವಿಟ್ಲ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಆನಂದ, ದಯಾನಂದ ಹಾಗೂ ಕಾರು ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.