ಕಾರ್ಪೋರೇಟರ್ ವಿಜಯೋತ್ಸವ ವೇಳೆ ಕಲ್ಲು ತೂರಾಟ; ಪೊಲೀಸರ ಸಹಿತ 10 ಮಂದಿಗೆ ಗಾಯ
ಮಂಗಳೂರು: ಮಹಾನಗರ ಪಾಲಿಕೆಯ ನೂತನ ಕಾರ್ಪೋರೇಟರ್ ಮೆರವಣಿಗೆ ಸಂದರ್ಭ ಕುಂಜತ್ತಬೈಲಿನಲ್ಲಿ ಗುರುವಾರ ರಾತ್ರಿ ಪೊಲೀಸರು ಹಾಗೂ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದ್ದು ನಾಲ್ವರು ಪೊಲೀಸರ ಸಹಿತ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮಹಾನಗರ ಪಾಲಿಕೆ ಚುನಾವಣೆಗೆ ಕಾವೂರು ವಾರ್ಡ್ನಿಂದ ಕಾಂಗ್ರೆಸ್ ಬೆಂಬಲಿತ ಮಹಮ್ಮದ್ ಆಯ್ಕೆಯಾಗಿದ್ದರು. ಪ್ರತಿಸ್ಪರ್ಧಿ ಬಿಜೆಪಿಯ ಶರತ್ ಸೋಲುಂಡಿದ್ದರು. ಗುರುವಾರ ರಾತ್ರಿ ಕಾಂಗ್ರೆಸ್ ಕಾರ್ಪೋರೇಟರ್ ಮಹಮ್ಮದ್ ವಿಜಯೋತ್ಸವ ಮೆರವಣಿಗೆ ನಡೆಯುತ್ತಿತ್ತು. ರಾತ್ರಿ ಸುಮಾರು 8.15ರ ವೇಳೆಗೆ ಕುಂಜತ್ತಬೈಲು ಅಯ್ಯಪ್ಪ ಮಂದಿರ ಬಳಿ ಬರುವಾಗ ಏಕಾಏಕಿ ಕಲ್ಲುಗಳು ಮೆರವಣಿಗೆ ಮೇಲೆ ತೂರಿ ಬಂದವು. ಈ ಕಲ್ಲು ಆರಂಭದಲ್ಲಿ ಪೊಲೀಸರ ಮೇಲೆಯೇ ಬಿದ್ದಿದೆ. ಇದರಿಂದ ನಾಲ್ವರು ಪೊಲೀಸರು ಗಾಯಗೊಂಡರು. ಬಳಿಕ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್ ನಡೆಸಿದ್ದಾರೆ.
ಪರಾಜಿತ ಬಿಜೆಪಿ ಅಭ್ಯರ್ಥಿ ಶರತ್ ಹಾಗೂ 50 ಕ್ಕೂ ಹೆಚ್ಚು ಮಂದಿ ಬಿಜೆಪಿ ಕಾರ್ಯಕರ್ತರು ಅಡಗಿ ಕುಳಿತು ಮೆರವಣಿಗೆ ಮೇಲೆ ಕಲ್ಲು ತೂರಿದ್ದಾರೆ ಎಂಬ ಆರೋಪ ಕೇಳಿಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಉದ್ರಿಕ್ತ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಪ್ರತಿಯಾಗಿ ಹಲ್ಲೆ ನಡೆಸಿದ್ದಾರೆ. ನಂತರ ಪರಿಸ್ಥಿತಿ ಹತೋಟಿಗೆ ಬಂದಿದ್ದು ಬಿಗುವಿನ ವಾತಾವರಣ ಕಂಡುಬಂದಿದೆ. ಸೂಕ್ಷ್ಮ ಪರಿಸ್ಥಿತಿನಿರ್ವಹಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದೇ ಇಂತಹ ಘಟನೆಗಳಿಗೆ ಕಾರಣ ಎನ್ನಲಾಗಿದೆ. ಗಾಯಾಳು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.