ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕುಕ್ಕೆಯಲ್ಲಿ ಮಿತಿ ಮೀರುತ್ತಿದೆ ತ್ಯಾಜ್ಯಭೀತಿ

Lingaraj Badiger
Updated On : 15 Mar 2013, 11:23 am

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಯಾತ್ರಿಕರ ಮತ್ತು ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದಂತೆ ತ್ಯಾಜ್ಯ ಸಮಸ್ಯೆಯೂ ಬೆಟ್ಟದಾಕಾರದಲ್ಲಿ ಬೆಳೆಯುತ್ತಿದೆ.
 ಜನದಟ್ಟಣೆಯ ಪರಿಣಾಮವಾಗಿಯೋ ಏನೋ, ಅನಿವಾರ್ಯವಾಗಿ ಮಾರ್ಗದ ಬದಿಯಲ್ಲೆ ಮಿನಿ ಕ್ಯಾಂಟಿನ್, ಮಸಾಲೆ ಪೂರಿ ಅಂಗಡಿಗಳು, ಸೌತೆಕಾಯಿ ಗಾಡಿಗಳು ನಾಯಿಕೊಡೆಯಂತೆ ಎದ್ದು ನಿಂತಿದೆ.
ಸ್ವಚ್ಛತೆ ಸಮಸ್ಯೆ: ಇದು ಒಂದು ಪರಿಸ್ಥಿತಿಯಾದರೆ ಮತ್ತೊಂದು ಕಡೆ ಸ್ವಚ್ಛತೆ ಸಮಸ್ಯೆ ಬೆಳೆಯುತ್ತಲೇ ಇದೆ. ತಾತ್ಕಾಲಿಕ ವಸತಿಗೃಹಗಳ ಕೊಳಚೆ ನೀರು, ಹೊಟೇಲ್, ಮಿನಿ ಕ್ಯಾಂಟೀನ್‌ಗಳ ತ್ಯಾಜ್ಯ, ಬೊಂಡ, ಬೀಡಿ, ಸಿಗರೇಟು, ಪಾನ್‌ಬೀಡದ ಪ್ಯಾಕೆಟ್‌ಗಳು, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲಿಗಳು ಬೇಕಾಬಿಟ್ಟಿಯಾಗಿ ಬಿದ್ದಿವೆ. ತ್ಯಾಜ್ಯ ವಿಲೇವಾರಿ ಘಟಕ ಅಸ್ತಿತ್ವದಲ್ಲಿ ಇದ್ದರೂ ಹೇರಳವಾಗಿ ಬೀಳುವ ತ್ಯಾಜ್ಯಗಳನ್ನು ಸುವ್ಯವಸ್ಥಿತವಾಗಿ ಸಾಗಿಸುವಲ್ಲಿ ಸಮಸ್ಯೆಗಳು ಎದುರಾಗುತ್ತಿವೆ. ತ್ಯಾಜ್ಯಗಳು ಎಲ್ಲೆಂದರಲ್ಲಿ ಹರಡಿ ದುರ್ನಾತ ಬೀರುತ್ತಿವೆ.   
ಕುಮಾರಧಾರವೂ ಮಲಿನ: ಕ್ಷೇತ್ರದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆ ಇಕ್ಕೆಲಗಳಲ್ಲಿ ಯಾತ್ರಾರ್ಥಿಗಳು ಗಲೀಜು ಮಾಡಿ ಚಿಕ್ಕ ಮಕ್ಕಳನ್ನು ಮಲ ಮೂತ್ರ ವಿಸರ್ಜನೆ ಮಾಡಿಸುವುದರಿಂದ ಈ ಸ್ಥಳ ದುರ್ನಾತ ಬೀರುವುದರಿಂದ ಇಲ್ಲಿ ಮೂಗಿಗೆ ಬೆರಳಿಟ್ಟು ಸಾಗುವಂತಾಗಿದೆ.
 ವಸತಿ ಗೃಹ ಹೊಟೇಲ್‌ಗಳ ಕೊಳಚೆ ನೀರು ಸರಾಗವಾಗಿ ದರ್ಪಣ ತೀರ್ಥ ನದಿಗೆ ಸೇರಿ ದರ್ಪಣ ತೀರ್ಥದ ನೀರು ಮಾಲಿನ್ಯವಾಗಿದೆ. ಈ ನದಿ ಹರಿದು ಕುಮಾರಧಾರವನ್ನು ಸೇರುತ್ತದೆ. ಕೆಳಗೆ ಹರಿಯುವ ನದಿಯ ನೀರನ್ನು ಯೇನೆಕಲ್ಲು ಸೇರಿದಂತೆ ಅಸುಪಾಸಿನ ಹೊಳೆ ಬದಿಯ ಜನರು ಕುಡಿಯಲು ಬಳಸುತ್ತಾರೆ.
ಈ ಮಲೀನ ನೀರು ಕುಡಿದವರ ಸ್ಥಿತಿ ದೇವರಿಗೇ ಪ್ರೀತಿ. ಸವಾರಿ ಮಂಟಪದ ಬಳಿ ಬಿದ್ದಿರುವ ರಾಶಿ ರಾಶಿ ತ್ಯಾಜ್ಯಗಳು ಯಾತ್ರಿಕರನ್ನು ಸ್ವಾಗತಿಸುತ್ತದೆ. ಜಾನುವಾರುಗಳು ಹಾಗೂ ನಾಯಿಗಳು ಈ ತ್ಯಾಜ್ಯ ರಾಶಿಯಲ್ಲಿ ಪರದಾಡುತ್ತಿವೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ.
ಯಾರು ಹೊಣೆ?: ಕ್ಷೇತ್ರದಲ್ಲಿ ಬೀಡಿ, ಸಿಗರೇಟು ಸೇರಿದದಂತೆ ಮತ್ತು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಅಲ್ಲಲ್ಲಿ ನಾಮಫಲಕ ನೇತು ಹಾಕಲಾಗಿದೆ. ಆದರೆ ವಾಸ್ತವ ಇರುವ ತ್ಯಾಜ್ಯ ಸಮಸ್ಯೆ ಹೋಗಲಾಡಿಸುವ ಬಗ್ಗೆ ಪಂಚಾಯತ್ ಆಗಲಿ ಆಡಳಿತ ಮಂಡಳಿ ಆಗಲಿ ನಿಗಾ ವಹಿಸಿದಂತೆ ಕಾಣುತ್ತಿಲ್ಲ. ಹಾಗಾಗಿ  ಕ್ಷೇತ್ರದಲ್ಲಿ ತ್ಯಾಜ್ಯ ಸಮಸ್ಯೆ ಜ್ವಲಂತವಾಗಿ ಕಾಡುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement