ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಗದ್ದಲ ಗೂಡಾದ ಆತ್ಮಾವಲೋಕನ ಸಭೆ

Lingaraj Badiger
Updated On : 15 Mar 2013, 11:23 am

ಮಂಗಳೂರು: ಸ್ಥಳೀಯ ಆಡಳಿತ ಚುನಾವಣೆಯಲ್ಲಿ ಕೆಲಸ ಮಾಡದ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಲೇ ಬೇಕು ಎಂದು ಆಗ್ರಹಿಸಿ ಜೆಡಿಎಸ್ ಜಿಲ್ಲಾಧ್ಯಕ್ಷರ ವಿರುದ್ಧ ಅಲ್ಪಸಂಖ್ಯಾತ ವಿಭಾಗ ಅಧ್ಯಕ್ಷರು ಬೆಂಬಲಿಗರ ಜತೆ ಏರಿ ಹೋದ ಘಟನೆ ನಡೆಯಿತು.
 ಇದಕ್ಕೆ ಮುನ್ನ ಶಶಿರಾಜ್ ಶೆಟ್ಟಿ ವೇದಿಕೆಯಲ್ಲಿ ಕುಳಿತುಕೊಳ್ಳಬಾರದು ಎಂದು ಕಾರ್ಯರ್ಕತರು ಆಗ್ರಹಿಸಿದ್ದು ಒಟ್ಟಾರೆ ಮಾಯಾ ಇಂಟರ್‌ನ್ಯಾಷನಲ್‌ನಲ್ಲಿ ಗುರುವಾರ ನಡೆದ ಜೆಡಿಎಸ್ ಆತ್ಮಾವಲೋಕನ ಸಭೆ ಅಕ್ಷರಶಃ ಗದ್ದಲದ ಗೂಡಾಯಿತು.
 ಕಾರ್ಯಕರ್ತರ ಸಂಕಷ್ಟಗಳನ್ನು ಕೇಳಿದರು. ಸೋತವರು ಭಾವನೆಗಳನ್ನು ಹೇಳಿದರು, ವೇದಿಕೆಯಲ್ಲಿದ್ದವರು ಆಲಿಸಿದರು. 'ನಿಮ್ಮಿಂದಾಗಿ ಪಕ್ಷ ಉಳಿದಿದೆ' ಎಂದು ಜಿಲ್ಲಾಧ್ಯಕ್ಷ ಎಂ.ಬಿ. ಸದಾಶಿವ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದರು.
 ಇದಕ್ಕೆ ಮುನ್ನ ಎಂ.ಡಿ. ಅಸ್ಲಮ್ ಸಭೆಯಲ್ಲಿ ಭಾಗವಹಿಸಿ ಭಾಷಣ ಬಿಗಿದು ಹೋಗಿದ್ದರು. ಮಧ್ಯಾಹ್ನ ಊಟ ಮಾಡಿ ಬಂದವರೇ ರಾಂಗ್ ಆಗಿದ್ದರು. ಇಬ್ಬರೂ ಚುನಾವಣೆ ಸಂದರ್ಭ ಕಾರ್ಯಕರ್ತರ ಕೈಗೆ ಸಿಕ್ಕಿಲ್ಲ ಎಂಬುದು ಎಂ.ಡಿ.ಅಸ್ಲಂ ಬೆಂಬಲಿಗರ ಆರೋಪ.
ಅಧ್ಯಕ್ಷ ಎಂ.ಬಿ. ಸದಾಶಿವ ಮತ್ತು ಕಾರ್ಯಾಧ್ಯಕ್ಷ ಮಹಮ್ಮದ್ ಕುಂಞ ತಕ್ಷಣ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಆಗ ಮೀನುಗಾರರ ಘಟಕ ಜಿಲ್ಲಾಧ್ಯಕ್ಷ ರತ್ನಾಕರ ಸುವರ್ಣ ಜಿಲ್ಲಾಧ್ಯಕ್ಷರ ಬೆಂಬಲಕ್ಕೆ ನಿಂತರು.
ಶಶಿರಾಜ್ ವಿರುದ್ಧ ಗರಂ: ಇದೇ ವೇಳೆ ಶಶಿರಾಜ್ ಶೆಟ್ಟಿ ಕೊಳಂಬೆ ಚುನಾವಣೆಯಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ ಎಂದು ಶ್ರೀನಿವಾಸ ಆಳ್ವ ಆರೋಪಿಸಿದರು. ಬಳಿಕ ಶಶಿರಾಜ್ ವೇದಿಕೆಯಲ್ಲಿ ಕುಳಿತುಕೊಳ್ಳಬಾರದು ಎಂದು ಪ್ರದೀಪ್ ನೇತೃತ್ವದಲ್ಲಿ ಕಾರ್ಯಕರ್ತರು ಆಗ್ರಹಿಸಿದರು. ಕೊನೆಗೆ ವೇದಿಕೆಯಲ್ಲಿದ್ದ ಗಣ್ಯರು ಸಮಾಧಾನ ಪಡಿಸಿದರು.
'ಕಾರ್ಯಕರ್ತರಿಗೆ ಭಾವನೆ ವ್ಯಕ್ತಪಡಿಸಲು ಅವಕಾಶ ನೀಡಿದಾಗ ಎಂ.ಡಿ.ಅಸ್ಲಂ ಅಲ್ಲಿರಲಿಲ್ಲ. ಅಲ್ಲಿ ಏನು ನಡೆದಿದೆ ಎನ್ನುವುದು ಗೊತ್ತಿಲ್ಲ. ಸಭೆ ಉತ್ತಮವಾಗಿ ಮುಗಿದಿತ್ತು. ಅಷ್ಟರಲ್ಲಿ ಬಂದು ಗದ್ದಲ ಎಬ್ಬಿಸಿದ್ದಾರೆ. ಎಂ.ಡಿ.ಅಸ್ಲಂ ಈ ಹಿಂದೆಯೂ ಅನೇಕ ಬಾರಿ ಪಕ್ಷದ ಸಭೆಯಲ್ಲಿ ಮಾಧ್ಯಮ ಮುಂದೆ ಜಗಳ ಮಾಡಿದ್ದಾರೆ, ಹೀಗಾಗಿ ನಿರ್ಲಕ್ಷ್ಯ ವಹಿಸಿದೆವು' ಎಂದು ಜಿಲ್ಲಾಧ್ಯಕ್ಷ ಎಂ.ಬಿ.ಸದಾಶಿವ ಹೇಳಿದ್ದಾರೆ.
'ರಾಜಕೀಯ ಪಕ್ಷದಲ್ಲಿ ಭಿನ್ನಾಭಿಪ್ರಾಯ ಸಹಜ. ಪಕ್ಷದ ಹಿತದೃಷ್ಟಿಯಿಂದ ಬಹಿರಂಗವಾಗಿ ಜಗಳಕ್ಕೆ ಇಳಿಯುವುದು ಸರಿ ಅಲ್ಲ. ಇದಕ್ಕೆ ಜಿಲ್ಲಾಧ್ಯಕ್ಷ ಎಂ.ಬಿ.ಸದಾಶಿವ ಹೊಣೆ ಹೊರಬೇಕು. ಕಾರ್ಯಕರ್ತರ ಅಭಿಪ್ರಾಯವನ್ನು ಹೈಕಮಾಂಡ್ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ರಾಜ್ಯ ಕಾರ್ಯದರ್ಶಿ ಎ.ಜಿ. ಹೆಗಡೆ ಹೇಳಿದ್ದಾರೆ.
'ಮಹಾನಗರ ಪಾಲಿಕೆ ಚುನಾವಣೆಯಲ್ಲಿ 48 ಮಂದಿ ಅಭ್ಯರ್ಥಿಗಳಿಗೆ ಸದಾನಂದ ಶೆಟ್ಟರು, ಚಿತ್ತರಂಜನ್ ರೈ, ಡಾ. ಉದಯ್, ನಾಗರಾಜ ಶೆಟ್ಟರು ಮಾತ್ರ ಹಣಕಾಸು ನೆರವು ನೀಡಿದ್ದಾರೆ. ಉಳಿದಂತೆ ಅಧ್ಯಕ್ಷರು ಸಹಿತ ಪಕ್ಷದಿಂದ ಒಂದು ಪೈಸೆ ಬಂದಿಲ್ಲ. ಹಣ ನುಂಗಿ ಹಾಕಿದ್ದಾರೆ ಎಂದು  ಅಧ್ಯಕ್ಷರು ಸುಳ್ಳು ಸುದ್ದಿ ಹಬ್ಬಿಸಿದರು. ಆದ್ದರಿಂದ ಅವರು ರಾಜಿನಾಮೆ ನೀಡಬೇಕು' ಎಂದು ಅಲ್ಪ ಸಂಖ್ಯಾತ ವಿಭಾಗ ಜಿಲ್ಲಾಧ್ಯಕ್ಷ ಎಂ.ಡಿ ಅಸ್ಲಂ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement