ರೈಲು ಡಿಕ್ಕಿ: ಗೇಟ್ ಸಿಬ್ಬಂದಿ ಸಾವು
ಮೂಲ್ಕಿ: ವಾಯು ವಿಹಾರಕ್ಕೆ ತೆರಳಿದ್ದ ರೇಲ್ವೆ ಗೇಟ್ ಸಿಬ್ಬಂದಿಗೆ ರೈಲು ಡಿಕ್ಕಿಯಾಗಿ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಮೂಲ್ಕಿ ಕಿಲ್ಪಾಡಿ ಗ್ರಾಮ ಪಂಚಾಯಿತಿನ ಅತಿಕಾರಿಬೆಟ್ಟುವಿನ ಕೊಲಕಾಡಿ ಬಳಿಯ ರೇಲ್ವೆ ಗೇಟ್ ಬಳಿ ಗುರುವಾರ ಬೆಳಗ್ಗೆ ರೇಲ್ವೆ ಗೇಟ್ ಸಿಬ್ಬಂದಿ ಗಣಪತಿ ಪಂಡಿತ್ (46) ರೈಲು ಹಳಿಯ ಬಳಿಯಲ್ಲಿ ವಾಯು ವಿಹಾರಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ರೈಲು ಡಿಕ್ಕಿಯಾಗಿದೆ. ಇದರಿಂದ ಕೈ ತುಂಡಾಗಿ ತಲೆಗೆ ತೀವ್ರ ಗಾಯವಾಗಿ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೈತಿಕ ಪೊಲೀಸ್‌ಗಿರಿ: ನಾಲ್ವರ ಸೆರೆ
ಕಾಪು: ನೈತಿಕ ಪೊಲೀಸ್ ಗಿರಿಯ ಬುಧವಾರ ರಾತ್ರಿ ನಡೆದ ಘಟನೆಯ ಸಂಬಂಧ ಪೊಲೀಸರು 4 ಮಂದಿ ಯುವಕರನ್ನು ಬಂಧಿಸಿದ್ದಾರೆ. ಬಂಧಿತರು ಜಲಾಲುದ್ದೀನ್ ಉಚ್ಚಿಲ (24), ನಾಸೀರ್ (21), ತೌಸೀಫ್ ಕೊಂಬುಗುಡ್ಡೆ (25) ಮತ್ತು ಮಾಬಿನ್ ಫಕೀರನಕಟ್ಟೆ (31). ಇಬ್ಬರು ಹಿಂದೂ ಯುವಕರು ಇಬ್ಬರು ಮುಸ್ಲಿಂ ಯುವತಿಯರೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು ಎಂಬ ಕಾರಣಕ್ಕೆ ಕಾಪುವಿನಲ್ಲಿ ಕೆಲವು ಮುಸ್ಲಿಂ ಯುವಕರು ಹಿಂದೂ ಯುವಕರನ್ನು ಬಸ್ಸಿನಿಂದ ಇಳಿಸಿ ಮನಸಾರೆ ಥಳಿಸಿದ್ದರು. ಈ ಬಗ್ಗೆ ಹಿಂದೂ ಸಂಘಟನೆಗಳು ಕಾಪು ಠಾಣೆಯ ಮುಂಜೆ ಪ್ರತಿಭಟನೆ ನಡೆಸಿದ್ದವು. ಗುರುವಾರ ಮತ್ತೆ ಕಾಪು ಪೇಟೆಯಲ್ಲಿ ಮೆರವಣಿಗೆ ಮಾಡಿದ್ದವು. ಬುಧವಾರ ರಾತ್ರಿ ಸ್ಥಳಕ್ಕೆ ಭೇಟಿ ನೀಡಿದ್ದ ಎಸ್ಪಿ ಡಾ. ಬೋರಲಿಂಗಯ್ಯ ಅವರು ಪ್ರಕರಣವನ್ನು ಕಾರ್ಕಳ ಡಿವೈಎಸ್ಪಿ ಜಯಂತ್ ಶೆಟ್ಟಿಗೆ ವಹಿಸಿದ್ದರು. ಜಯಂತ್ ಶೆಟಿ 4 ಮಂದಿ ಯುವಕರನ್ನು ಬಂಧಿಸಿದ್ದಾರೆ. ಇನ್ನಷ್ಟು ಮಂದಿ ಬಂಧನಕ್ಕೊಳಗಾಗುವ ಸಾಧ್ಯತೆಗಳಿವೆ. ಬಸ್‌ನಿಂದ ಹೊರಗೆಳೆಯಲಾದ ಮಂಗಳೂರಿನ ಯುವಕರಾದ ರಾಜೇಶ್ ಮತ್ತು ಶ್ರೀನಾಥ್ ಅವರನ್ನು ಮೈದಾನಕ್ಕೆ ಎಳೆದುಕೊಂಡು ಹೋಗಿ ಬ್ಯಾಟು ಮತ್ತು ದೊಣ್ಣೆಗಳಿಂದ ತೀವ್ರವಾಗಿ ಥಳಿಸಲಾಗಿತ್ತು. ತೀವ್ರವಾಗಿ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.