ಶ್ವಾನದಳ ಈಜುಕೊಳ ನೀರಿಗೆ ಬರ!
-ಜಿತೇಂದ್ರ ಕುಂದೇಶ್ವರ
ಮಂಗಳೂರು: ಜಿಲ್ಲೆಯ ಪೊಲೀಸ್ ನಾಯಿಗಳಿಗೆ ಸುಸಜ್ಜಿತ ಕೊಳ ನಿರ್ಮಾಣಗೊಂಡಿದೆ, ಆದರೆ ಅದರಲ್ಲಿ ನೀರೇ ಇಲ್ಲ. ಹೀಗಾಗಿ ಪೊಲೀಸರು 14 ಕಿ.ಮೀ. ದೂರದ ಮರವೂರು ಡ್ಯಾಂ ಕೆಳಭಾಗದ ನದಿಯಲ್ಲಿ ನಾಯಿಗಳಿಗೆ ವೀಕೆಂಡ್ ಈಜಿನ ಮಜಾ ವ್ಯವಸ್ಥೆ ಮಾಡಿದ್ದಾರೆ.
ಪೊಲೀಸ್ ಕಮಿಷನರೇಟ್ ಬಳಿ 3 ವರ್ಷದ ಹಿಂದೆ ನಿರ್ಮಾಣಗೊಂಡಿರುವ ಪೊಲೀಸ್ ನಾಯಿ ವಸತಿಗೃಹದಲ್ಲಿ ವರ್ಷದ ಹಿಂದಷ್ಟೇ ಗೃಹಪ್ರವೇಶ ಆಗಿತ್ತು. ಪೊಲೀಸ್ ನಾಯಿಗಳು ಹಿಂದೆ ಹಳೆ ಹೆಂಚಿನ ಕಟ್ಟಡದಲ್ಲಿದ್ದವು. ಹೊಸದಾಗಿ ಆರ್‌ಸಿಸಿ ಕಾಂಕ್ರಿಟ್ ಕಟ್ಟಡದಲ್ಲಿ ಶ್ವಾನ ದಳ ಸ್ಥಳಾಂತರ ಮಾಡಿದ್ದರು. ಹೊಸ ಕಟ್ಟಡದಲ್ಲಿ ಬಿಸಿಲ ಬೇಗೆ ಹೆಚ್ಚು. ಅಲ್ಲಿ ಈಜುಕೊಳ ನಿರ್ಮಿಸಿದರೂ ನೀರು ತುಂಬಿಸಲು ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಪಕ್ಕದಲ್ಲಿಯೇ ಇರುವ ಬೋರ್‌ವೆಲ್‌ನಿಂದ ನೀರು ಹಾಯಿಸಲು ವಿದ್ಯುತ್ ಬೇಕಿತ್ತು. ಆದರೆ ವಿದ್ಯುತ್ ಬಿಲ್ ಬಾಕಿ ಇದ್ದ ಕಾರಣ ವಿದ್ಯುತ್ ಸಂಪರ್ಕ ನೀಡಿರಲಿಲ್ಲ. 'ಕನ್ನಡ ಪ್ರಭ' ಪತ್ರಿಕೆಯಲ್ಲಿ ಈ ಬಗ್ಗೆ ಕಳೆದ ವರ್ಷ ವರದಿ ಪ್ರಕಟವಾದ ತಕ್ಷಣ ಈಜುಕೊಳಕ್ಕೆ ನೀರು ಹರಿಸಿದ್ದರು.
ಇದೀಗ ಮತ್ತೆ ಬೇಸಗೆಯಲ್ಲಿ ಈಜು ಕೊಳದಲ್ಲಿ ನೀರು ಬತ್ತಿದೆ. ಈ ಬಗ್ಗೆ ಪೊಲೀಸರಲ್ಲಿ ಕೇಳಿದರೆ ಬೋರ್‌ವೆಲ್‌ನಿಂದ ನೀರು ಸರಿಯಾಗಿ ಬರುತ್ತಿಲ್ಲ ಎನ್ನುತ್ತಾರೆ. ಜತೆಯಲ್ಲಿ ಈಜು ಕೊಳದಿಂದ ನೀರು ಹಾಕುವುದೂ ಸಮಸ್ಯೆಯಾಗಿದೆ.
ಚರಂಡಿ ದಕ್ಷಿಣ ಭಾಗ ಇಳಿಜಾರು ಆಗಿರುವುದರಿಂದ ಆರಂಭದಲ್ಲಿ ಆ ಕಡೆಗೆ ಚರಂಡಿ ನೀರು ಹರಿಯುವಂತೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಹೊಸ ಚರಂಡಿ ವ್ಯವಸ್ಥೆಯಂತೆ ದಿಕ್ಕು ಉತ್ತರಕ್ಕೆ ತಿರುಗಿದ ಪರಿಣಾಮ ಈಜು ಕೊಳದ ನೀರು ಖಾಲಿ ಮಾಡುವುದು ಕಷ್ಟವಾಗಿದೆ.
'ಬೋರ್‌ವೆಲ್ ನೀರು ಪೊಲೀಸ್ ಕಮಿಷನರೇಟ್ ಕಚೇರಿಗೆ ಹೋಗುತ್ತದೆ ಉಳಿದಂತೆ ಶ್ವಾನದಳಕ್ಕೆ ನೀರು ಬರುತ್ತದೆ. ಆದರೆ ಈಜುಕೊಳ ತುಂಬಿಸುವಷ್ಟು ಕೊಳವೆಬಾವಿಯಲ್ಲಿ ನೀರಿನ ಸಾಮರ್ಥ್ಯ ಇಲ್ಲದಿರುವುದೇ ಕಾರಣ' ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.
'ನಿತ್ಯ ಬಕೇಟ್‌ನಲ್ಲಿ ನೀರು ಹಿಡಿದು ನಾಯಿಗಳಿಗೆ ಸ್ನಾನ ಮಾಡಿಸುತ್ತೇವೆ. ವಾರಕ್ಕೊಮ್ಮೆ ಮರವೂರು ಡ್ಯಾಂ ಕೆಳಭಾಗದ ನದಿಯಲ್ಲಿ ಈಜಲು ತೆರಳುತ್ತೇವೆ. ಅವುಗಳಿಗೂ ವಾರಾಂತ್ಯದಲ್ಲಿ ಹೊರ ಹೋಗಿ ಈಜಾಡುವುದು ಖುಷಿ ಮತ್ತು ರಿಲ್ಯಾಕ್ಸ್ ನೀಡುತ್ತದೆ' ಎನ್ನುತ್ತಾರೆ ಶ್ವಾನದಳ ಸಿಬ್ಬಂದಿ.
ಬಾಂಬ್ ಪತ್ತೆ ತರಬೇತಿ: ಶ್ವಾನದಳದಲ್ಲಿ ಎಸ್ಪಿ ಮತ್ತು ಕಮಿಷನರೇಟ್ ವ್ಯಾಪ್ತಿಗೆ ಸೇರಿದ 8 ನಾಯಿಗಳಿವೆ. ಬಾಂಬ್ ಪತ್ತೆ ಹಚ್ಚುವ ಸ್ಪೆಷಲಿಸ್ಟ್ ನಾಯಿಗೆ ವಿಶೇಷ ತರಬೇತಿಗೆ ಎಂದು ಮಧ್ಯಪ್ರದೇಶಕ್ಕೆ ಕಳುಹಿಸಲಾಗಿದೆ. ಅಲ್ಲಿ ಬಿಎಸ್‌ಎಫ್ ಮಿಲಿಟರಿ ಕ್ಯಾಂಪ್‌ನಲ್ಲಿ 6 ತಿಂಗಳ ಕಾಲ ನಾಯಿಗಳಿಗೆ ತರಬೇತಿ ನೀಡಲಾಗುತ್ತದೆ.
ಬಾಂಬ್ ಪತ್ತೆ ಮಾಡುವ ಸೂಕ್ಷ್ಮ ವಿಧಾನಗಳನ್ನು ಕಲಿಸಲಾಗುತ್ತಿದೆ. ಅಲ್ಲಿ ರಾಜ್ಯದಿಂದ ನಾಲ್ಕು ನಾಯಿಗಳು ತರಬೇತಿ ಪಡೆಯುತ್ತಿವೆ.