ಸೌಜನ್ಯಾ ಕೊಲೆ ಪ್ರಕರಣ ಸಿಬಿಐಗೆ ಒಪ್ಪಿಸಲು ಆಗ್ರಹ
ಬೆಳ್ತಂಗಡಿ: ಜಿಲ್ಲೆಯ, ರಾಜ್ಯದ ಮಹಿಳಾ ಸಂಘಟನೆಗಳು ಇನ್ನಾದರೂ ಬೆಳ್ತಂಗಡಿಗೇ ಬಂದು ಸೌಜನ್ಯಾ ಕುಟುಂಬದವರಿಗೆ ಸಾಂತ್ವನ ಹೇಳುವುದರೊಂದಿಗೆ ಪ್ರತಿಭಟನೆ ತೀವ್ರಗೊಳಿಸಬೇಕು. ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಒತ್ತಾಯಿಸಬೇಕು ಎಂದು ಕರಾವಳಿ ಮಹಿಳಾ ಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷೆ ವಿದ್ಯಾ ನಾಯಕ್ ಆಗ್ರಹಿಸಿದರು.
ಅವರು ನಾಗರಿಕ ಸೇವಾ ಟ್ರಸ್ ಮತ್ತು ಕರಾವಳಿ ಮಹಿಳಾ ಜಾಗೃತಿ ವೇದಿಕೆ ಆಶ್ರಯದಲ್ಲಿ ಟ್ರಸ್ಟ್ ಸಭಾಭವನದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತಾಡುತ್ತಿದ್ದರು.
ಸೌಜನ್ಯಾ ಅತ್ಯಾಚಾರ, ಕೊಲೆಯನ್ನು ಒಬ್ಬನ ತಲೆಗೆ ಕಟ್ಟಿ ಶಂಕಿತ ಇತರ ಆರೋಪಿಗಳನ್ನು ಕಾನೂನಿನ ಕೈಯಿಂದ ಪಾರು ಮಾಡುವುದರ ವಿರುದ್ಧ ವಿವಿಧ ಸಂಘಟನೆಗಳಿಂದ ಎಷ್ಟೇ ಪ್ರತಿಭಟನೆ ನಡೆದರೂ ಪ್ರಯೋಜನವಾಗುತ್ತಿಲ್ಲ. ತಾಲೂಕಿನಲ್ಲಿ ಸೂತಕದ ವಾತಾವರಣ ಇದೆ ಎಂದು ತಿಳಿಸಿದರು.
ಬೆಳ್ತಂಗಡಿ ತಾ.ಪಂ. ಮಾಜಿ ಅಧ್ಯಕ್ಷೆ ಮಮತಾ ಯಂ. ಶೆಟ್ಟಿ ಮಾತಾಡಿ ಮಹಿಳಾ ಸಮಾನತೆಯ ಅಗತ್ಯವನ್ನು ಉದಾಹರಣೆ ಸಹಿತ ವಿವರಿಸಿದರು.
ವೇದಿಕೆಯ ಅಧ್ಯಕ್ಷೆ ಮುಮ್ತಾಜ್ ಮಾತಾಡಿ ವರದಕ್ಷಿಣೆಯ ಪಿಡುಗು ನಿಲ್ಲಿಸಬೇಕು. ಹುಡುಗರು ವರದಕ್ಷಿಣೆ ತೆಗೆದುಕೊಳ್ಳುವುದಿಲ್ಲವೆಂದು ಪ್ರತಿಜ್ಞಾ ಮಾಡಬೇಕು. ನಾನು ನನ್ನ ಮಗನಿಗೆ ವರದಕ್ಷಿಣೆ ತೆಗೆದುಕೊಂಡಿಲ್ಲ, ಟ್ರಸ್ಟ್ನಿಂದಾಗಿ ನನ್ನಂತಹ ಮಹಿಳೆಯರ ಧೈರ್ಯ ಹೆಚ್ಚಿದೆ ಎಂದರು.
ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ್ ನಾಯಕ್ ಮಾತನಾಡುತ್ತಾ ಟ್ರಸ್ಟ್ ಮಹಿಳಾಪರ, ಪರಿಸರಪರ, ದಲಿತರ ಚಿಂತನೆಯೊಂದಿಗೆ ಹೋರಾಟ ಮಾಡುತ್ತಾ ಬಂದಿದೆ. ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ವಿಶೇಷವಾಗಿ ಧರ್ಮಸ್ಥಳದಲ್ಲಿ ಆಗಿರುವ ಆತ್ಮಹತ್ಯೆ ಮತ್ತು ಕೊಲೆ ಪ್ರಕರಣಗಳ ಬಗ್ಗೆ ವಿಶೇಷ ತನಿಖೆಗೆ ಆಯೋಗ ರಚಿಸಬೇಕು. ಇತ್ತೀಚೆಗೆ ನಡೆದ ತುಳುವರ ಪರ್ಬದಲ್ಲಿ ಈ ಬಗ್ಗೆ ನಿರ್ಣಯವಾಗಿದೆ. ಆಗ ಮಾತ್ರ ಸೌಜನ್ಯ ಸಹಿತ ಅನೇಕ ಪ್ರಕರಣಗಳ ಅಪರಾಧಿಗಳ ಪತ್ತೆ ಮತ್ತು ಇಂತಹ ಪ್ರಕರಣಗಳ ತಡೆ ಸಾಧ್ಯ. ಇಂತಹ ನ್ಯಾಯಯುತ, ಧರ್ಮದ ಹೋರಾಟಕ್ಕೆ ಬೆಂಬಲಿಸುವ ಬದಲು ನಮ್ಮನ್ನೇ ಮಟ್ಟ ಹಾಕಲು ಪ್ರಯತ್ನಿಸುತ್ತಿರುವುದು ವಿಪರ್ಯಾಸ. ಇದು ಮತ್ತಷ್ಟು ಸಂಶಯಕ್ಕೆ ಕಾರಣ ಮಾಡುತ್ತಿದೆ ಎಂದು ಹೇಳಿದರು. ಟ್ರಸ್ಟ್ನ ಜತೆ ಕಾರ್ಯದರ್ಶಿ ಶುಭವಾಣಿ ವಂದಿಸಿದರು.
ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್ ವಿರುದ್ಧ ಸುಳ್ಳು ಆರೋಪ ಹೊರಿಸಿ ಹಾಕಿರುವ ಎಫ್ಐಆರ್ ಅನ್ನು ರದ್ದುಗೊಳಿಸಿ ಪ್ರಕರಣವನ್ನು ಹಿಂದೆಗೆಯುವಂತೆ ಸರ್ಕಾರವನ್ನು ಒತ್ತಾಯಿಸಲು ಹಾಗೂ ಈ ಸಂಬಂಧ ತೀವ್ರ ಕಾರ್ಯಾಚರಣೆ ರೂಪಿಸಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಯಿತು.