ನ್ಯಾಯಬೆಲೆ ಅಂಗಡಿಯಿಂದ ಅಕ್ರಮ ಮಾರಾಟ ಜಾಲ ಪತ್ತೆ
ವಿಟ್ಲ: ವಿಟ್ಲದ ಬೊಬ್ಬೆಕೇರಿಯಲ್ಲಿರುವ ನ್ಯಾಯಬೆಲೆ ಅಂಗಡಿಯಿಂದ ಸಾರ್ವಜನಿಕರಿಗೆ ವಿತರಿಸಬೇಕಿದ್ದ ಸೀಮೆಎಣ್ಣೆ ಹಾಗೂ ಅಕ್ಕಿಯನ್ನು ಗುಪ್ತವಾಗಿ ಖಾಸಗಿ ವ್ಯಕ್ತಿಗೆ ಸರಬರಾಜು ಮಾಡುತ್ತಿದ್ದ ವೇಳೆ 'ಫ್ರೆಂಡ್ಸ್ವಿಟ್ಲ' ಸಂಘಟನೆ ಕಾರ್ಯಕರ್ತರು ಪತ್ತೆಹಚ್ಚಿ ಪೊಲೀಸರಿಗೊಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.
ಬೊಬ್ಬೆಕೇರಿ ನ್ಯಾಯಬೆಲೆ ಅಂಗಡಿಯಲ್ಲಿ ಸಾರ್ವಜನಿಕರಿಗೆ ಸೀಮೆಎಣ್ಣೆ ಹಾಗೂ ಅಕ್ಕಿಯನ್ನು ಸಮರ್ಪಕವಾಗಿ ನೀಡುತ್ತಿರಲಿಲ್ಲ. ಇದರಿಂದ ರೋಸಿ ಅವರು ಸ್ಥಳೀಯ ಯುವಕರಲ್ಲಿ ತಮ್ಮ ಅಳಲು ವ್ಯಕ್ತಪಡಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಫ್ರೆಂಡ್ಸ್ ವಿಟ್ಲ ಕಾರ್ಯಕರ್ತರು ಈ ತಂಡವನ್ನು ರೆಡ್ ಹ್ಯಾಂಡಾಗಿ ಪತ್ತೆ ಹಚ್ಚಲು ಸಿದ್ಧತೆ ನಡೆಸುತ್ತಿದ್ದರು.
ಶುಕ್ರವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಬಿ.ಸಿ. ರೋಡ್ ಮೂಲದ ಅಂಬಾಸೆಡರ್ ಕಾರ್ನಲ್ಲಿ ನ್ಯಾಯಬೆಲೆ ಅಂಗಡಿಯಿಂದ 35 ಲೀಟರ್ನ ನಾಲ್ಕು ಕ್ಯಾನ್ ಹಾಗೂ 10 ಲೀಟರ್ನ ಒಂದು ಕ್ಯಾನ್ನಲ್ಲಿ ಒಟ್ಟು 150 ಲೀ. ಸೀಮೆಯಣ್ಣೆ ಹಾಗೂ ಒಂದು ಗೋಣಿಚೀಲ ಅಕ್ಕಿ ತುಂಬಿಸಲಾಗುತ್ತಿತ್ತು. ಬಳಿಕ ಕಾರು ಬಿ.ಸಿ.ರೋಡ್ ಕಡೆ ತೆರಳುತ್ತಿದ್ದ ವೇಳೆ ಕಾರ್ಯಪ್ರವೃತ್ತರಾದ ಯುವಕರು ಕಾರನ್ನು ಅಡ್ಡಗಟ್ಟಿ ಪತ್ತೆಹಚ್ಚಿದ್ದಾರೆ.
ಕಾರು ವಶಕ್ಕೆ: ಕಾರಿನಲ್ಲಿ ಸಿಕ್ಕಿದ ಅಕ್ಕಿ ಪಡಿತರ ಅಕ್ಕಿ ಎಂಬುದು ತನಿಖೆಯಿಂದ ತಿಳಿದು ಬಂದಿದೆ,ಅಕ್ರಮದಲ್ಲಿ ಪಾಲ್ಗೊಂಡಿರುವವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದೇವೆ ಜೊತೆಗೆ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ವಿಭಾಗದ ಉಪತಹಸೀಲ್ದಾರ್ ಶ್ರೀಧರ್ ಮಾಹಿತಿ ನೀಡಿದ್ದಾರೆ.